ಬೆಂಗಳೂರು: ಬೆಂಗಳೂರಿನ ಐಟಿ ಕಂಪನಿಯೊಂದರ ಆವರಣದಲ್ಲಿ ನಡೆಯುತ್ತಿದ್ದ ಡೇ ಕೇರ್ ಸೆಂಟರ್ ನಲ್ಲಿ ಮಕ್ಕಳ ಮೇಲೆ ಸಿಬ್ಬಂದಿಗಳಿಂದ ದೌರ್ಜನ್ಯ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಘಟನೆಯನ್ನು ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.
ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳು ನಿಜವೇ ಆಗಿದ್ದರೆ, ಇದು ಮಕ್ಕಳ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಆಯೋಗ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ (DGP) ಆಯೋಗ ನೋಟಿಸ್ ಜಾರಿ ಮಾಡಿದ್ದು, ಮುಂದಿನ ಎರಡು ವಾರಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಆಘಾತಕಾರಿ ದೃಶ್ಯಗಳ ಪ್ರಕಾರ, ಈ ಶಿಶುವಿಹಾರದಲ್ಲಿ ದಾದಿಯರು ಅಳುತ್ತಿರುವ ಪುಟ್ಟ ಮಕ್ಕಳನ್ನು ಸುಮ್ಮನಿರಿಸಲು ಅತಿ ಕ್ರೂರ ವಿಧಾನಗಳನ್ನು ಬಳಸುತ್ತಿದ್ದರು. ಅಳುವ ಮಕ್ಕಳನ್ನು ವಾಷಿಂಗ್ ಮಷಿನ್ ಒಳಗಡೆ ಇಡುವುದು, ಶೌಚಾಲಯದ ಜೆಟ್ ಸ್ಪ್ರೇ ಮೂಲಕ ಬಾಯಿಗೆ ಬಲವಂತವಾಗಿ ನೀರು ಸಿಂಪಡಿಸುವುದು, ಹಾಗೂ ಶೌಚಾಲಯದೊಳಗೆ ಹಾಕಿ ಬೀಗ ಹಾಕುವ ಮೂಲಕ ಮಕ್ಕಳನ್ನು ಮೌನವಾಗಿಸಲು ಯತ್ನಿಸುತ್ತಿದ್ದ ದೃಶ್ಯಗಳು ಬೆಚ್ಚಿಬೀಳಿಸಿದ್ದವು.
ಅಳುತ್ತಿದ್ದ ಮಕ್ಕಳನ್ನು ವೆಸ್ಟರ್ನ್ ಕಮೋಡ್‌ಗಳ ಮೇಲೆ ಬಲವಂತವಾಗಿ ಕೂರಿಸಿ ಸುಮ್ಮನಿರಬೇಕು ಎಂದು ಬೆದರಿಸಲಾಗುತ್ತಿತ್ತು. ಐಟಿ ಕಂಪನಿಯ ಉದ್ಯೋಗಿಗಳು ತಮ್ಮ ಮಕ್ಕಳನ್ನು ನಂಬಿಕೆಯಿಂದ ಇಲ್ಲಿಗೆ ಬಿಡುತ್ತಿದ್ದರು. ಮಕ್ಕಳ ಸಹಾಯವಾಣಿ ಅಧಿಕಾರಿಯೊಬ್ಬರಿಗೆ ಈ ವಿಡಿಯೋಗಳು ತಲುಪಿದ ನಂತರ ಕ್ರೌರ್ಯ ಬೆಳಕಿಗೆ ಬಂದಿದೆ. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಈ ಡೇ ಕೇರ್ ಸೆಂಟರ್ ನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಡೇ ಕೇರ್ ಸೆಂಟರ್ ನಲ್ಲಿ ಕ್ರೌರ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ವಿಜಯಲಕ್ಷ್ಮಿ ಎಂಬಾಕೆಯನ್ನು ಹೆಚ್‌ಎಎಲ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಈ ಕ್ರೌರ್ಯವನ್ನು ಹೊರಗೆ ತಂದ ವಿಸ್ಲ್‌ಬ್ಲೋವರ್ (ಮಾಹಿತಿ ನೀಡಿದ ಸಿಬ್ಬಂದಿ) ಅವರನ್ನು ಕೆಲಸದಿಂದ ವಜಾಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕೃತ ಪತ್ರ ಬರೆದಿದ್ದು, ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಎಲ್ಲಾ ಶಿಶುವಿಹಾರ ಹಾಗೂ ಡೇ ಕೇರ್‌ಗಳಿಗೆ ಕಟ್ಟುನಿಟ್ಟಿನ ಕಡ್ಡಾಯ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.

