ಬೆಳಗ್ಗೆ ಕಚೇರಿಗೆ ಬಂದ ತಕ್ಷಣ ಕಂಪ್ಯೂಟರ್ ಆನ್ ಮಾಡುತ್ತೀರಿ. ಇ-ಮೇಲ್ಗಳಿಗೆ ಉತ್ತರಿಸುವುದು, ಮೀಟಿಂಗ್ಗಳಲ್ಲಿ ಭಾಗವಹಿಸುವುದು, ಕೆಲಸದ ಒತ್ತಡದಲ್ಲಿ ಮಧ್ಯಾಹ್ನದ ಊಟವನ್ನೂ ಮರೆತುಬಿಡುವುದು… ಹೀಗೆ ಸಂಜೆ ಮನೆಗೆ ತೆರಳುವವರೆಗೂ ಬಹುತೇಕ ಸಮಯ ಕುರ್ಚಿಯ ಮೇಲೆಯೇ ಕಳೆಯುತ್ತೀರಿ.
ವಿದ್ಯಾರ್ಥಿಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಓದು, ಆನ್ಲೈನ್ ತರಗತಿ, ಪ್ರಾಜೆಕ್ಟ್ಗಳಿಗಾಗಿ ಗಂಟೆಗಟ್ಟಲೆ ಲ್ಯಾಪ್ಟಾಪ್ ಮುಂದೆ ಕುಳಿತುಕೊಳ್ಳುತ್ತಾರೆ.
ಆದರೆ, ದಿನನಿತ್ಯದ ಈ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತಿದೆ ಎಂಬುದು ನಿಮಗೆ ಗೊತ್ತೇ? ಹೊರನೋಟಕ್ಕೆ ಸಾಮಾನ್ಯವಾಗಿ ಕಾಣುವ ಈ ಜೀವನಶೈಲಿ ಭವಿಷ್ಯದಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಮತ್ತು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ.
ನಿರಂತರವಾಗಿ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಕೆಲಸ ಮಾಡುವುದರಿಂದ ದೈಹಿಕ ಸಮಸ್ಯೆಗಳಷ್ಟೇ ಅಲ್ಲದೆ, ಕೆಲವರಲ್ಲಿ ಮಾನಸಿಕ ಒತ್ತಡ ಮತ್ತು ಖಿನ್ನತೆಯಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ದಿನಕ್ಕೆ 9.5 ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವವರಲ್ಲಿ ಆರೋಗ್ಯದ ಅಪಾಯ ಹಾಗೂ ಅಕಾಲಿಕ ಮರಣದ ಸಾಧ್ಯತೆ ಹೆಚ್ಚಿರಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ.
ಕುತ್ತಿಗೆ, ಬೆನ್ನು ನೋವು ನಿಮ್ಮನ್ನು ಕಾಡುತ್ತಿದೆಯೇ?
ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವವರಿಗೆ ಕುತ್ತಿಗೆ ನೋವು, ಭುಜಗಳ ಬಿಗಿತ ಮತ್ತು ಬೆನ್ನು ನೋವು ಸಾಮಾನ್ಯ ಸಮಸ್ಯೆಗಳಾಗಿವೆ. ಅದರಲ್ಲೂ ಪರದೆಯನ್ನು ಕೆಳಮಟ್ಟದಲ್ಲಿ ಇಟ್ಟುಕೊಂಡು ನಿರಂತರವಾಗಿ ತಲೆ ಬಾಗಿಸಿ ಕೆಲಸ ಮಾಡುವುದರಿಂದ ಸರ್ವೈಕಲ್ ಸಮಸ್ಯೆಗಳು ಹಾಗೂ ಸೊಂಟದ ನೋವು ಕಾಣಿಸಿಕೊಳ್ಳಬಹುದು.
ಇದನ್ನು ತಪ್ಪಿಸಲು ಕಂಪ್ಯೂಟರ್ ಪರದೆಯನ್ನು ಕಣ್ಣಿನ ಮಟ್ಟಕ್ಕೆ ಸರಿಸುಮಾರು ಸಮಾನ ಎತ್ತರದಲ್ಲಿ ಇಟ್ಟುಕೊಳ್ಳಬೇಕು. ಪಾದಗಳು ನೆಲದ ಮೇಲೆ ಆರಾಮವಾಗಿ ನಿಲ್ಲುವಂತೆ ಮತ್ತು ಮೊಣಕಾಲುಗಳು ಸುಮಾರು 90 ಡಿಗ್ರಿ ಕೋನದಲ್ಲಿರುವಂತೆ ಕುಳಿತುಕೊಳ್ಳಬೇಕು. ಸರಿಯಾದ ಕುರ್ಚಿ ಮತ್ತು ಕುಳಿತುಕೊಳ್ಳುವ ಭಂಗಿಯೂ ಬಹಳ ಮುಖ್ಯ.
ಕಣ್ಣು ಉರಿ, ದೃಷ್ಟಿ ಮಂಜಾಗುತ್ತಿದೆಯೇ?
ದಿನವಿಡೀ ಸ್ಕ್ರೀನ್ ನೋಡುವುದರಿಂದ ಕಣ್ಣುಗಳು ಒಣಗುವುದು, ಉರಿ ಕಾಣಿಸಿಕೊಳ್ಳುವುದು ಮತ್ತು ದೃಷ್ಟಿ ಮಂಜಾಗುವಂತಹ ಸಮಸ್ಯೆಗಳು ಎದುರಾಗಬಹುದು. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಕಣ್ಣುಗಳಿಗೆ ವಿಶ್ರಾಂತಿ ನೀಡಲು 20-20-20 ನಿಯಮವನ್ನು ಪಾಲಿಸುವುದು ಉತ್ತಮ. ಅಂದರೆ, ಪ್ರತಿ 20 ನಿಮಿಷಗಳಿಗೊಮ್ಮೆ ಕನಿಷ್ಠ 20 ಸೆಕೆಂಡುಗಳ ಕಾಲ ಸುಮಾರು 20 ಅಡಿ ದೂರದಲ್ಲಿರುವ ವಸ್ತುವನ್ನು ನೋಡಬೇಕು.
ಆರೋಗ್ಯ ಕಾಪಾಡಲು ಈ 5 ನಿಮಿಷ ಸಾಕು!
ಕೆಲಸದ ಒತ್ತಡ ಎಷ್ಟೇ ಇದ್ದರೂ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಕನಿಷ್ಠ ಪ್ರತಿ ಅರ್ಧ ಗಂಟೆಗೊಮ್ಮೆ ಕುರ್ಚಿಯಿಂದ ಎದ್ದು ಐದು ನಿಮಿಷಗಳ ಕಾಲ ಅತ್ತಿತ್ತ ನಡೆಯಿರಿ. ಇದರಿಂದ ದೇಹದ ಚಟುವಟಿಕೆ ಹೆಚ್ಚುವುದರ ಜತೆಗೆ ಮನಸ್ಸಿಗೂ ವಿಶ್ರಾಂತಿ ಸಿಗುತ್ತದೆ.
ಇದರೊಂದಿಗೆ ಕುತ್ತಿಗೆ ಮತ್ತು ಭುಜಗಳಿಗೆ ಸರಳ ಸ್ಟ್ರೆಚಿಂಗ್ ವ್ಯಾಯಾಮ ಮಾಡಿ. ಸಾಕಷ್ಟು ನೀರು ಕುಡಿಯಿರಿ. ಕೆಲಸದ ನಡುವೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ.
ನೆನಪಿಡಿ, ಕೆಲಸಕ್ಕಾಗಿ ಇಡೀ ದಿನ ಕುಳಿತುಕೊಳ್ಳುವ ಅನಿವಾರ್ಯತೆ ಇರಬಹುದು. ಆದರೆ ಆರೋಗ್ಯವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ. ಪ್ರತಿದಿನದ ಸಣ್ಣ ಬದಲಾವಣೆಗಳು ಮುಂದಿನ ದಿನಗಳಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಲು ನೆರವಾಗಬಹುದು.

