Dailyhunt
IPL 2026: ಪ್ರಭ್‌ಸಿಮ್ರಾನ್, ಶ್ರೇಯಸ್ ಐಯ್ಯರ್ ಅಬ್ಬರಕ್ಕೆ ಮುಂಬೈ ಇಂಡಿಯನ್ಸ್ ಧೂಳೀಪಟ

IPL 2026: ಪ್ರಭ್‌ಸಿಮ್ರಾನ್, ಶ್ರೇಯಸ್ ಐಯ್ಯರ್ ಅಬ್ಬರಕ್ಕೆ ಮುಂಬೈ ಇಂಡಿಯನ್ಸ್ ಧೂಳೀಪಟ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿಂದು ( ಏಪ್ರಿಲ್ 16 ) ನಡೆದ ಐಪಿಎಲ್ 2026ರ ಲೀಗ್ ಹಂತದ 24ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಬೌಲಿಂಗ್ ಆರಿಸಿಕೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.

ಅದರಂತೆ ಮುಂಬೈ ಇಂಡಿಯನ್ಸ್ ಕ್ವಿಂಟನ್ ಡಿ ಕಾಕ್ ಅಬ್ಬರದ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್‌ಗೆ 196 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪ್ರಭ್‌ಸಿಮ್ರನ್ ಸಿಂಗ್ ಹಾಗೂ ನಾಯಕ ಶ್ರೇಯಸ್ ಐಯ್ಯರ್ ಅಬ್ಬರದ ಜತೆಯಾಟದ ನೆರವಿನಿಂದ 16.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ದಾಖಲಿಸಿದೆ.

ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ರಯಾನ್ ರಿಕೆಲ್ಟನ್ ಹಾಗೂ ಕ್ವಿಂಟನ್ ಡಿ ಕಾಕ್ ಕಣಕ್ಕಿಳಿದರು. ರಯನಾ ರಿಕೆಲ್ಟನ್ ಕೇವಲ 2 ರನ್‌ಗೆ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಡಕ್‌ಔಟ್ ಆದರು. ಹೀಗೆ ಕೇವಲ 12 ರನ್‌ಗೆ ತನ್ನ ಮೊದಲ ಎರಡು ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮೂರನೇ ವಿಕೆಟ್‌ಗೆ ಜತೆಯಾದ ಡಿ ಕಾಕ್ ಹಾಗೂ ನಮನ್ ಧೀರ್ 122 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ನಮನ್ ಧೀರ್ 31 ಎಸೆತಗಳಲ್ಲಿ 50 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 14 ರನ್ ಗಳಿಸಿ ಔಟ್ ಆದರು. ಬೆನ್ನಲ್ಲೇ ಶೆರ್ಫೆನ್ ರುದರ್‌ಫೋರ್ಡ್ 1 ಹಾಗೂ ತಿಲಕ್ ವರ್ಮಾ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಆರಂಭದಿಂದ ಕೊನೆಯ ಎಸೆತದವರೆಗೂ ಕಣದಲ್ಲಿದ್ದು ಹೋರಾಡಿ ತಮ್ಮ ಮೂರನೇ ಐಪಿಎಲ್ ಶತಕ ಬಾರಿಸಿದ ಡಿ ಕಾಕ್ 60 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ ಅಜೇಯ 112 ರನ್ ಚಚ್ಚಿದರು.

ಪಂಜಾಬ್ ಕಿಂಗ್ಸ್ ಪರ ಅರ್ಶ್‌ದೀಪ್ ಸಿಂಗ್ ಮೂರು ವಿಕೆಟ್, ಮಾರ್ಕೊ ಯಾನ್ಸೆನ್ ಹಾಗೂ ಶಶಾಂಕ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.

ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಪ್ರಿಯನ್ಶ್ ಆರ್ಯ ಹಾಗೂ ಪ್ರಭ್‌ಸಿಮ್ರನ್ ಸಿಂಗ್ ಕಣಕ್ಕಿಳಿದರು. ಪ್ರಿಯನ್ಶ್ ಆರ್ಯ 15 ರನ್‌ಗೆ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೇ ಕೂಪರ್ ಕೊಲೊನಿ 17 ರನ್‌ಗೆ ಔಟ್ ಆದರು. ಈ ಮೂಲಕ 4.3 ಓವರ್‌ಗಳಲ್ಲಿ ಕೇವಲ 45 ರನ್‌ಗೆ ಎರಡು ವಿಕೆಟ್ ಕಳೆದುಕೊಂಡ ಪಂಜಾಬ್ ಕಿಂಗ್ಸ್‌ಗೆ ಮೂರನೇ ವಿಕೆಟ್‌ಗೆ ಜತೆಯಾದ ಪ್ರಭ್‌ಸಿಮ್ರನ್ ಸಿಂಗ್ ಹಾಗೂ ನಾಯಕ ಶ್ರೇಯಸ್ ಐಯ್ಯರ್ 66 ಎಸೆತಗಳಲ್ಲಿ 139 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಸಮೀಪಕ್ಕೆ ತಲುಪಿಸಿದರು. ಶ್ರೇಯಸ್ ಐಯ್ಯರ್ 35 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 66 ರನ್ ಬಾರಿಸಿದರು. ಪ್ರಭ್‌ಸಿಮ್ರನ್ ಸಿಂಗ್ 39 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 80 ರನ್ ಬಾರಿಸಿದರು ಹಾಗೂ ಮಾರ್ಕಸ್ ಸ್ಟಾಯ್ನಿಸ್ 5 ಎಸೆತಗಳಲ್ಲಿ ಅಜೇಯ 10 ರನ್ ಗಳಿಸಿದರು.

ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಅಬ್ಬರಕ್ಕೆ ಉತ್ತರವಿಲ್ಲದೇ ಮುಂಬೈ ಇಂಡಿಯನ್ಸ್ ಬೌಲಿಂಗ್ ಪಡೆ ಕಂಗಾಲಾಯಿತು. ಘಜಫ್ನರ್ ಎರಡು ವಿಕೆಟ್ ಹಾಗೂ ಶಾರ್ದೂಲ್ ಠಾಕೂರ್ ಒಂದು ವಿಕೆಟ್ ಪಡೆದರು.

Dailyhunt
Disclaimer: This content has not been generated, created or edited by Dailyhunt. Publisher: Kannada Dunia