Dailyhunt
ಇರಾನ್ ನೂತನ ಸರ್ವಾಧಿಕಾರಿ ಮೊಜ್ತಾಬಾ ಖಮೇನಿ ಎಲ್ಲಿ? Iran Conflict

ಇರಾನ್ ನೂತನ ಸರ್ವಾಧಿಕಾರಿ ಮೊಜ್ತಾಬಾ ಖಮೇನಿ ಎಲ್ಲಿ? Iran Conflict

ಮೆರಿಕ & ಇಸ್ರೇಲ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳನ್ನು ಎದುರು ಹಾಕಿಕೊಂಡು ಯುದ್ಧ ಮಾಡುತ್ತಿರುವ ಇರಾನ್ ದೇಶ ಈಗಾಗಲೇ ತನ್ನ ದೊಡ್ಡ ದೊಡ್ಡ ನಾಯಕರನ್ನು ಕಳೆದುಕೊಂಡಿದೆ. ಇರಾನ್ ಸೇನಾಧಿಕಾರಿಗಳ ಸಾವು ಸೈನಿಕರಲ್ಲಿ ಆತಂಕ ಹೆಚ್ಚು ಮಾಡುತ್ತಿದ್ದರೆ, ಇರಾನ್‌ನ ರಾಜಕೀಯ ನಾಯಕರು ಕೂಡ ಒಬ್ಬೊಬ್ಬರಾಗಿ ಇದೀಗ ಜೀವ ಕಳೆದುಕೊಳ್ಳುತ್ತಾ ಇದ್ದಾರೆ.

ಅದರಲ್ಲೂ ಇರಾನ್ ಸರ್ವಾಧಿಕಾರಿ ಆಗಿದ್ದ ಖಮೇನಿ ಸಾವು ಇಡೀ ಮಧ್ಯಪ್ರಾಚ್ಯ ಭಾಗದಲ್ಲಿ ಬಿರುಗಾಳಿ ಸೃಷ್ಟಿಸಿದೆ. ಹೀಗಾಗಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿಗೆ ಇರಾನ್ ದೇಶ ನೂತನ ಸರ್ವಾಧಿಕಾರಿ ಪಟ್ಟ ಕಟ್ಟಿತ್ತು. ಆದರೆ ಇದೀಗ ಮೊಜ್ತಾಬಾ ಖಮೇನಿ ಜೀವಂತವಾಗಿ ಇರುವ ಬಗ್ಗೆಯು ಕೂಡ ಅನುಮಾನ ಶುರುವಾಗಿದೆ.

ಮೊಜ್ತಾಬಾ ಖಮೇನಿ ಇರಾನ್ ದೇಶದ ನೂತನ ಸರ್ವಾಧಿಕಾರಿ ಪಟ್ಟಕ್ಕೆ ಆಯ್ಕೆ ಆಗಿ ಈಗಾಗಲೇ ಹತ್ತಿರ, ಹತ್ತಿರ 1 ತಿಂಗಳು ತುಂಬುತ್ತಿದೆ. ಹೀಗಿದ್ದರೂ ಮೊಜ್ತಾಬಾ ಖಮೇನಿ ಮಾತ್ರ ಒಂದು ಕಡೆಯೂ ಬಹಿರಂಗವಾಗಿ ಕಾಣಿಸಿ ತನ್ನ ದೇಶದ ಪ್ರಜೆಗಳಿಗೆ ಧೈರ್ಯ ತುಂಬಿಲ್ಲ. ಅದು ಬಿಡಿ, ಮೊಜ್ತಾಬಾ ಖಮೇನಿ ಮಾಡಿರುವ ಒಂದೇ ಒಂದು ಭಾಷಣದ ತುಣುಕು ಕೂಡ ಪ್ರಸಾರ ಆಗಿಲ್ಲ. ಹೀಗಿದ್ದಾಗ ಇರಾನ್ ಜನರು ಕೂಡ ಮೊಜ್ತಾಬಾ ಖಮೇನಿ ಕುರಿತು ಚಿಂತಿತರಾಗಿದ್ದು, ಇರಾನ್ ಸೇನೆ ಈ ವಿಚಾರದಲ್ಲಿ ಸಾಕಷ್ಟು ರಹಸ್ಯ ಕಾಪಾಡಿಕೊಂಡು ಬಂದಿದೆ. ಅಕಸ್ಮಾತ್, ಮೊಜ್ತಾಬಾ ಖಮೇನಿ ಕೂಡ ಮೃತಪಟ್ಟಿದ್ದರೆ ಆ ಸುದ್ದಿ ಹೊರಗೆ ಗೊತ್ತಾದರೆ ಅದು ಇರಾನ್ ದೇಶದ ಆಂತರಿಕ ಸುರಕ್ಷತೆಗೆ ಧಕ್ಕೆ ತರುವ ಭೀತಿ ಇದೆ. ಹೀಗಾಗಿ ಈ ವಿಚಾರದಲ್ಲಿ ಇರಾನ್ ಯಾವುದೇ ಬಹಿರಂಗ ಹೇಳಿಕೆಗಳನ್ನು ನೀಡುತ್ತಿಲ್ಲ ಎನ್ನಲಾಗಿದೆ.

ಮೊಜ್ತಾಬಾ ಖಮೇನಿ ಕೂಡ ಸಾವು?
ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಈಗಾಗಲೇ ಘೋಷಣೆ ಮಾಡಿರುವಂತೆ, ಇರಾನ್ ದೇಶಕ್ಕೆ ಯಾರೇ ಹೊಸ ಸರ್ವಾಧಿಕಾರಿ ಆಯ್ಕೆಯಾಗಿ ಬಂದರೂ ಮೊದಲು ಆ ವ್ಯಕ್ತಿಯ ಕಥೆ ಮುಗಿಸಲು ಪ್ಲಾನ್ ಮಾಡುವುದಾಗಿ ಭಾರಿ ಮಹತ್ವದ ಹೇಳಿಕೆ ನೀಡಿದ್ದವು ಎರಡೂ ದೇಶಗಳು. ಅದರಂತೆ, ಮೊಜ್ತಾಬಾ ಖಮೇನಿ ಇರಾನ್ ಸರ್ವಾಧಿಕಾರಿ ಆಗಿ ಆಯ್ಕೆಯಾದ ಮರುದಿನವೇ ದಾಳಿ ಮಾಡಲಾಗಿತ್ತು. ದಾಳಿಯಲ್ಲಿ ಮೊಜ್ತಾಬಾ ಖಮೇನಿಗೆ ಗಂಭೀರ ಗಾಯ ಆಗಿರುವ ಸುದ್ದಿ ಹಬ್ಬಿದ್ದು, ರಷ್ಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಮಾಹಿತಿ ಕೂಡ ಇದೆ. ಆದರೆ ಈ ವಿಚಾರದಲ್ಲಿ ಈವರೆಗೂ ಇರಾನ್ ಮಾತ್ರ ಯಾವುದೇ ಅಧಿಕೃತ ಮಾಹಿತಿ ಹೊರಹಾಕಲು ಸಿದ್ಧವೇ ಇಲ್ಲ, ಆ ಮೂಲಕ ತನ್ನ ದೇಶದ ನಾಯಕನನ್ನು ಇರಾನ್ ಸೇನೆಯ ಅಧಿಕಾರಿಗಳು ರಕ್ಷಣೆ ಮಾಡುತ್ತಿದ್ದಾರೆ.

ಸರ್ವಾಧಿಕಾರಿ ಖಮೇನಿ ನಿಗೂಢ ಸ್ಥಳದಲ್ಲಿ?
ಒಟ್ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಈ ಯುದ್ಧ ಸದ್ಯಕ್ಕೆ ನಿಲ್ಲುವ ಸಾಧ್ಯತೆಯೇ ಕಾಣಿಸುತ್ತಿಲ್ಲ ಈಗ. ಇರಾನ್ ವಿರುದ್ಧ ಅಮೆರಿಕ & ಅದರ ಪಟಾಲಂ ಮುಗಿಬಿದ್ದು ದಾಳಿ ಮಾಡಿದರೂ ಯುದ್ಧ ಗೆಲ್ಲಲು ಆಗ್ತಾನೇ ಇಲ್ಲ. ಒಂದೆಡೆ ಇರಾನ್ ದೇಶವನ್ನು ಕೆಲವೇ ಗಂಟೆಗಳಲ್ಲಿ ಸೋಲಿಸಿ, ಅಲ್ಲಿರುವ ಸಂಪತ್ತು ಹಾಗೂ ತೈಲವನ್ನ ವಶಕ್ಕೆ ಪಡೆಯಬಹುದು ಎಂಬ ಕೆಲವರ ಲೆಕ್ಕಾಚಾರಗಳು ಉಲ್ಟಾ ಆಗಿಬಿಟ್ಟಿವೆ.

ಹೀಗಿದ್ದಾಗ ಇರಾನ್ ಕೊಡುತ್ತಿರುವ ಏಟಿಗೆ ಆ ಕಡೆ ಇಸ್ರೇಲ್ ಸುಸ್ತಾಗಿ ಹೋಗಿದ್ದರೆ ಇನ್ನೊಂದೆಡೆ ಅಮೆರಿಕ ಸಾಕಪ್ಪಾ ಇವರ ಸಹವಾಸ ಅಂತಿದೆ. ಹೀಗಿದ್ದಾಗಲೇ, ಅತ್ತ ಇರಾನ್ ದೇಶದ ನೂತನ ಸರ್ವಾಧಿಕಾರಿ ನಿಗೂಢ ಸ್ಥಳದಲ್ಲಿ ಇರುವ ಬಗ್ಗೆ ಮಾಹಿತಿ ಇದ್ದು ಯುದ್ಧವು ಕುತೂಹಲ ಕೆರಳಿಸುತ್ತಿದೆ. ಹಾಗೇ ಇನ್ನು ಕೆಲವೇ ದಿನಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದೊಡ್ಡ ಮಟ್ಟದ ದಾಳಿಯನ್ನು ಇರಾನ್ ವಿರುದ್ಧ ನಡೆಸುವ ಸಾಧ್ಯತೆ ಇದೀಗ ದಟ್ಟವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia