ಬೆಂಗಳೂರು: ಅಪರಾಧ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿರುವ ವ್ಯಕ್ತಿಯ ಆಸ್ತಿ ಹಕ್ಕುಗಳು ಮೊಟಕುಗೊಳ್ಳುವುದಿಲ್ಲ. ಜೈಲಿನಲ್ಲಿದ್ದರೂ ಆಸ್ತಿಯನ್ನು ಮಾರಾಟ ಮಾಡಲು, ನೋಂದಣಿ ಮಾಡಲು ಕಾನೂನು ಬದ್ಧವಾಗಿ ಅವಕಾಶವಿದೆ ಎಂದು ಹೈಕೋರ್ಟ್ ಹೇಳಿದೆ.
ಧಾರವಾಡ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಕಮಲಾಪುರ ಗ್ರಾಮದ ಬಸವರಾಜು ಎಂಬಾತ ತನ್ನ 22 ಗುಂಟೆ ಜಮೀನು ಮಾರಾಟಕ್ಕೆ ಮುಂದಾಗಿದ್ದರು.
ಆಸ್ತಿ ನೋಂದಣಿಗೆ ಖುದ್ದಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಉಪ ನೋಂದಣಾಧಿಕಾರಿಯೇ ಜೈಲಿಗೆ ಬರಲು ಒಪ್ಪಿದ್ದರು. ಜೈಲಿನ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆ ಬಸವರಾಜು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣಾಧೀನ ಕೈದಿಗೆ ಸಾಮಾನ್ಯರಂತೆ ತನ್ನ ಆಸ್ತಿಯನ್ನು ಪರಭಾರೆ ಮಾಡುವ ಹಕ್ಕುಗಳು ಇರುತ್ತವೆ ಎಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ. ಜೈಲುವಾಸವು ವ್ಯಕ್ತಿಯ ಆಸ್ತಿ ಮಾಲೀಕತ್ವವನ್ನು ಕಸಿದುಕೊಳ್ಳುವುದಿಲ್ಲ. ಅಲ್ಲದೆ ಜೈಲಿನಲ್ಲಿರುವ ವ್ಯಕ್ತಿಯನ್ನು ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಒತ್ತಾಯಿಸುವಂತಿಲ್ಲ. ಬದಲಾಗಿ ಉಪ ನೋಂದಣಾಧಿಕಾರಿಯೇ ಜೈಲಿಗೆ ಭೇಟಿ ನೀಡಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇದಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವುದು ಜೈಲಾಧಿಕಾರಿಗಳ ಕರ್ತವ್ಯವಾಗಿದೆ ಎಂದು ಹೈಕೋರ್ಟ್ ಹೇಳಿದೆ.

