ಕಾರವಾರ: ಕೈದಿಯೊಬ್ಬನಿಗೆ ಸರ್ಕಾರದಿಂದ ಬಂದ ಹಣ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜೈಲರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.
ಹಳಿಯಾಳದ ಸಬ್ ಜೈಲಿನ ಜೈಲರ್ ಕಲ್ಲಪ್ಪ ಗಸ್ತಿ ಲೋಕಾಯುಕ್ತ ಬಲೆಗೆ ಬಿದ್ದವರು. ಎರಡು ವರ್ಷಗಳಿಂದ ಜೈಲಿನಲ್ಲಿದ್ದ ಕೈದಿ ರಾಜ್ ಕುಮಾರ್ ಗೆ 60 ಸಾವಿರ ರೂಪಾಯಿ ಲಂಚಕ್ಕೆ ಬೇದಿಕೆ ಇಟ್ಟಿದ್ದರು.
ರಾಜ್ ಕುಮಾರ್ ಜೈಲಿನಲ್ಲಿ ಕೆಲಸ ಮಾಡಿದ್ದರಿಂದ ಆತನಿಗೆ ಸರ್ಕಾರದಿಂದ 1.34 ಲಕ್ಷ ಹಣ ಹಾಗೂ 45 ಸಾವಿರ ಹಣ ಎರಡು ಕಂತಿನಲ್ಲಿ ಬಿಡುಗಡೆಯಾಗಿತ್ತು. ಈ ಹಣ ನೀಡಲು ಜೈಲರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಮುಂಗಡವಾಗಿ ಹತ್ತು ಸಾವಿರ ಹಣ ಬೇರೆಯೊಬ್ಬರ ಹೆಸರಿನಲ್ಲಿ ಫೋನ್ ಪೇಗೆ ಹಾಕಿಸಿಕೊಂಡಿದ್ದು, ನಂತರ ಅಲರ್ಟ್ ಆಗಿ ಉಳಿದ ಹಣ ಪಡೆಯಲು ಬೇರೆ ಬೇರೆ ಕಡೆ ಬರುವಂತೆ ಜೈಲರ್ ದೂರುದಾರ ರಾಜುಗೆ ತಿಳಿಸಿದ್ದರು. ಈ ಬಗ್ಗೆ ಲೋಕಾಯುಕ್ತದಲಿ ದೂರು ದಾಖಲಾಗಿತ್ತು. ಕಾರವಾರ ಲೋಕಾಯುಕ್ತ ಡಿಎಸ್ಪಿ ಧನ್ಯಾ ನಾಯಕ್ ಹಾಗೂ ಇನ್ಸ್ಪೆಕ್ಟರ್ ವಿನಾಯಕ್ ಬಿಲ್ಲವ ನೇತೃತ್ವದಲ್ಲಿ ದಾಳಿ ನಡೆಸಿ ಕಲ್ಲಪ್ಪ ಗಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಕಲ್ಲಪ್ಪ ಗಸ್ತಿ ಫೋನ್ ಪೇ ಮೂಲಕ ಹಣ ಪಡೆದಿರುವುದು ಖಚಿತವಾದ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಬೆಳಗಾವಿ ಜೈಲಿಗೆ ವರ್ಗಾವಣೆ ಮಾಡಲಾಗಿದೆ.

