Dailyhunt
'ಕಳ್ಳನಿಗೊಂದು ಪಿಳ್ಳೆ ನೆಪ' ಎಂಬಂತೆ ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ತಗಾದೆ: 2029 ಆದರೂ ಬಿಡೆವು ಮಸೂದೆ ಜಾರಿ ಮಾಡುತ್ತೇವೆ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

'ಕಳ್ಳನಿಗೊಂದು ಪಿಳ್ಳೆ ನೆಪ' ಎಂಬಂತೆ ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ತಗಾದೆ: 2029 ಆದರೂ ಬಿಡೆವು ಮಸೂದೆ ಜಾರಿ ಮಾಡುತ್ತೇವೆ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ವದೆಹಲಿ: ಕಾಂಗ್ರೆಸ್ ಪಕ್ಷ ಶೇ.33 ಮಹಿಳಾ ಮೀಸಲಾತಿಗೆ ವಿರೋಧಿಸುತ್ತ ಅಪರಾಧಿ ಸ್ಥಾನದಲ್ಲಿ ನಿಂತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ದೆಹಲಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ OBC, SCST ಮತ್ತು ಮಹಿಳಾ ವಿರೋಧಿಯಾಗೇ ನಡೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ನೆಹರೂ ಅವರು SCST, ರಾಜೀವ್ ಗಾಂಧಿ ಒಬಿಸಿಯನ್ನು, ಮಂಡಲ ಕಮಿಷನ್ ಅನ್ನು ವಿರೋಧಿಸಿದರು. ಇದೀಗ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮಹಿಳಾ ಮೀಸಲಾತಿಯನ್ನು ಧಿಕ್ಕರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಇಂಡಿ ಒಕ್ಕೂಟ ದೇಶದಲ್ಲಿ ಜನರ ವಿಶ್ವಾಸ ಕಳೆದುಕೊಂಡಿದೆ. ಹಾಗಾಗಿ ಭಯದಿಂದ ಕ್ಷೇತ್ರ ಪುನರ್ವಿಂಗಡಣೆ ಮತ್ತು ಶೇ.33ರ ಮಹಿಳಾ ಮೀಸಲಾತಿಗೆ ತಗಾದೆ ತೆಗೆಯುತ್ತಿದೆ ಎಂದು ಟೀಕಿಸಿದರು.

ಜನಗಣತಿ ಆಧಾರಿತವಾಗಿ ಕ್ಷೇತ್ರ ಪುನರ್ವಿಂಗಡಣೆ ಮಾಡಿದರೆ ದಕ್ಷಿಣ ರಾಜ್ಯಗಳಿಗೆ, ಸಣ್ಣ ರಾಜ್ಯಗಳಿಗೆ ಅನ್ಯಾಯ ಆಗುತ್ತದೆ ಎಂಬುದು ಕಾಂಗ್ರೆಸ್ ನ ಸುಳ್ಳು ವಾದವಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ ಹೀಗೆ ದಕ್ಷಿಣದ ಎಲ್ಲಾ ರಾಜ್ಯಗಳಿಗೂ ಕ್ಷೇತ್ರಗಳ ಸಂಖ್ಯೆ ಸಹಜವಾಗಿಯೇ ಹೆಚ್ಚುತ್ತದೆ. ಅದರಲ್ಲಿ ಅನುಮಾನವೇ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಜೋಶಿ, ಕಾಂಗ್ರೆಸ್ ಪಕ್ಷ ವಿನಾಕಾರಣ ಕುಂಟು ನೆಪ ಹೇಳುತ್ತಿದೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಪಕ್ಷ ಶೇ.33ರಷ್ಟು ಮಹಿಳಾ ಮೀಸಲಾತಿ ಬೆಂಬಲಿಸದೇ ಇರುವುದು “ಮಹಿಳಾ ವಿರೋಧಿ” ಎಂಬುದನ್ನು ರುಜುವಾತುಪಡಿಸಿದೆ. ದೇಶದ ಒಳಿತಿಗೆ ಯಾವತ್ತೂ ಹೀಗೆ ವಿರೋಧವಾಗೇ ನಡೆದುಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ಪಕ್ಷ ಪದೇ ಪದೇ ದಕ್ಷಿಣ-ಭಾರತ, ಉತ್ತರ ಭಾರತ ಎಂದೆಣಿಸುತ್ತಿದೆ. ಈಗ ಡಿಲಿಮಿಟೇಷನ್ ವಿಚಾರದಲ್ಲೂ ಅದೇ ವರ್ತನೆ ತೋರುತ್ತಿದೆ. ಹಾಗಾದರೆ ಉತ್ತರ ಭಾರತಕ್ಕೆ ಕಾಂಗ್ರೆಸ್ ಏನು ಎಳ್ಳು ನೀರು ಬಿಡುತ್ತದೆಯೇ? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.

2011ರ ಜನಗಣತಿ ಆಧಾರಿತವಾಗಿ ಕ್ಷೇತ್ರ ಪುನರ್ವಿಂಗಡಣೆ ಮತ್ತು ಶೇ.33ರ ಮಹಿಳಾ ಮೀಸಲಾತಿ ಎರಡನ್ನೂ ಕೇಂದ್ರ ಸರ್ಕಾರ ಒಟ್ಟೊಟ್ಟಿಗೆ ತೆಗೆದುಕೊಂಡಿದೆ. ಆದರೆ, ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡ ಭಯದಲ್ಲಿ ವಿರೋಧಿಸುತ್ತಿದೆ ಎಂದು ಆರೋಪಿಸಿದರು.

ಲೋಕಸಭೆ ಸ್ಥಾನಗಳು 543 ಇರಲಿ, 850 ಆಗಲಿ ಮತದಾರರು ಮಾತ್ರ ಅವರೇ ಇರುತ್ತಾರೆ ಅಲ್ಲವೇ? ಎಂದು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ ಜೋಶಿ, ಒಂದೊಂದು ಕ್ಷೇತ್ರದಲ್ಲಿ 40-50 ಲಕ್ಷ ಮತದಾರರಿದ್ದಾರೆ. ಇಷ್ಟು ಜನಸಂಖ್ಯೆಗೆ ಒಬ್ಬ ಸಂಸದರು ಎಲ್ಲರನ್ನೂ ತಲುಪಲು ಸಾಧ್ಯವೇ? ಕಾಂಗ್ರೆಸ್ ಇದರ ಅರಿವಿಲ್ಲವೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಮಹಿಳಾ ವಿರೋಧಿ ಆಗಿರುವುದು ಸ್ಪಷ್ಟ. ಹಾಗಾಗಿ ‘ಕಳ್ಳನಿಗೊಂದು ಪಿಳ್ಳೆ ನೆಪ’ ಎಂಬಂತೆ ತಗಾದೆ ತೆಗೆಯುತ್ತಿದೆ. ಮಹಿಳಾ ಮೀಸಲಾತಿ ವಿರೋಧಿಸಿ ಇದೀಗ ಸದನದಲ್ಲಿ ಸಮರ್ಥಿಸಿಕೊಳ್ಳಲು ಪರದಾಡುತ್ತಿದೆ. ಮಹಿಳಾ ಮೀಸಲಾತಿ ವಿರೋಧ ಮಾಡಬಾರದು ಎಂಬುದು ಕಾಂಗ್ರೆಸ್ ಸಂಸದರಿಗೂ ಗೊತ್ತಿತ್ತು. ಆದರೆ, ಅಪ್ರಬುದ್ಧ ನಾಯಕ ರಾಹುಲ್ ಗಾಂಧಿ ಮಾತು ಕೇಳಿ ಕೆಟ್ಟಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಚಾಟಿ ಬೀಸಿದರು.

ಪ್ರಿಯಾಂಕಾ ಗಾಂಧಿ ಬುದ್ಧಿವಂತೆ ಎಂದುಕೊಂಡಿದ್ದೆ. ಆದರೆ, ರಾಹುಲ್ ಗಾಂಧಿಯಂತೆ ಇವರೂ ಅಪ್ರಬುದ್ಧರ ರೀತಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Kannada Dunia