Dailyhunt Logo
  • Light mode
    Follow system
    Dark mode
    • Play Story
    • App Story
ಮಂಗಳೂರು KRIDL ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ: ಅಮಾನತುಗೊಳಿಸಿ ಕ್ರಮ ಕೈಗೊಳ್ಳುವಂತೆ ಸಿಎಂ ಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ

ಮಂಗಳೂರು KRIDL ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ: ಅಮಾನತುಗೊಳಿಸಿ ಕ್ರಮ ಕೈಗೊಳ್ಳುವಂತೆ ಸಿಎಂ ಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ

ಮಂಗಳೂರು: ಮಂಗಳೂರು ಕೆ.ಆರ್.ಐ.ಡಿ.ಎಲ್ ನ ಇಬ್ಬರು ಅಧಿಕಾರಿಗಳ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿರುವ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್​​ ರೈ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​​ಗೆ ಪತ್ರ ಬರೆದಿದ್ದಾರೆ.

ಮಂಗಳೂರು ಕೆ.ಆರ್.ಐ.ಡಿ.ಎಲ್. ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯ್ ಮತ್ತು ಕಿರಿಯ ಇಂಜಿನಿಯರ್ ಪ್ರಜ್ವಲ್ ವಿರುದ್ಧ ಕರ್ತವ್ಯ ನಿರ್ವಹಣೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಹಾಗೂ ದೂರುಗಳು ಕೇಳಿಬಂದಿವೆ.

ವಿಶೇಷವಾಗಿ, ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲಾಖೆಯ ಸಚಿವರಿಗೆ ಮಾಸಿಕವಾಗಿ ಹಣ ಸಂದಾಯ ಮಾಡಬೇಕಾಗುತ್ತದೆ ಎಂದು ಹೇಳಿ, ಕೆ.ಆರ್.ಐ.ಡಿ.ಎಲ್. ಚಾರ್ಜ್ ಹೆಸರಿನಲ್ಲಿ ಶೇ.7ರಷ್ಟು ವರೆಗೆ ಹೆಚ್ಚುವರಿ ಹಣವನ್ನು ಪಡೆಯಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡಿರುವ ಬಗ್ಗೆ ಆರೋಪಗಳು ಇವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಿ ಅಥವಾ ಆಡಳಿತಾತ್ಮಕ ಹಿತದೃಷ್ಟಿಯಿಂದ ಬೇರೆಡೆಗೆ ವರ್ಗಾವಣೆ ಮಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕತೆ, ಗುಣಮಟ್ಟ ಹಾಗೂ ನಿಯಮಾನುಸಾರ ಕಾರ್ಯನಿರ್ವಹಣೆ ಅತ್ಯಂತ ಅಗತ್ಯ. ಆದರೆ, ಈ ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ಸತ್ಯವಾಗಿದ್ದಲ್ಲಿ, ಅದು ಸಾರ್ವಜನಿಕ ಹಣದ ದುರುಪಯೋಗಕ್ಕೆ ಕಾರಣವಾಗುವುದಲ್ಲದೆ, ಇಲಾಖೆಯ ಘನತೆ ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುವ ಗಂಭೀರ ವಿಷಯವಾಗಿದೆ. ಆದ್ದರಿಂದ, ಅಧಿಕಾರಿಗಳ ವಿರುದ್ಧ ಈಗಾಗಲೇ ಬಂದಿರುವ ದೂರುಗಳು ಮತ್ತು ಆರೋಪಗಳ ಕುರಿತು ನಿಷ್ಪಕ್ಷಪಾತ ಇಲಾಖಾ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ಅಲ್ಲದೆ, ತನಿಖೆ ಪೂರ್ಣಗೊಳ್ಳುವವರೆಗೆ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸುವುದು ಅಥವಾ ಆಡಳಿತಾತ್ಮಕ ಹಿತದೃಷ್ಟಿಯಿಂದ ಬೇರೆಡೆಗೆ ವರ್ಗಾವಣೆ ಮಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಆರೋಪಗಳು ಸಾಬೀತಾದಲ್ಲಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅನ್ವಯಿಸುವ ಸೇವಾ ನಿಯಮಗಳು ಹಾಗೂ ಇಲಾಖಾ ನಿಯಮಾವಳಿಗಳನ್ವಯ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸರ್ಕಾರದ ಹಣಕ್ಕೆ ನಷ್ಟ ಉಂಟಾಗಿರುವುದು ಅಥವಾ ಅಕ್ರಮವಾಗಿ ಹಣ ವಸೂಲಿ ಮಾಡಿರುವುದು ತನಿಖೆಯಿಂದ ದೃಢಪಟ್ಟಲ್ಲಿ, ಅಂತಹ ಮೊತ್ತವನ್ನು ವಸೂಲಿ ಮಾಡುವುದರ ಜೊತೆಗೆ ಕಾನೂನುಬದ್ಧ ಕ್ರಮ ಜರುಗಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia