Dailyhunt Logo
  • Light mode
    Follow system
    Dark mode
    • Play Story
    • App Story
ಮೇ 25ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಮೇ 25ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಹಿನ್ನೆಲೆಯಲ್ಲಿ ಮೇ 25ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಕಡಲು ಪ್ರಕ್ಷುಬ್ದಗೊಳ್ಳಲಿದೆ. ಭಾರಿ ಬಿರುಗಾಳಿ ಬೀಸುವ ಮುನ್ಸೂಚನೆ ಇದ್ದು, ಸೊಮಾಲಿಯಾ ಕರಾವಳಿ ಭಾಗದಲ್ಲಿ ಗಾಳಿಯ ವೇಗ 65 ಕಿ.ಮೀ ತಲುಪುವ ಸಾಧ್ಯತೆಯಿದೆ.

ಈ ಹಿನ್ನೆಲೆ ಕರ್ನಾಟಕ, ಕೇರಳ ಕರಾವಳಿ, ಲಕ್ಷದ್ವೀಪ, ಮಾಲ್ಡೀವ್ಸ್,ಕೊಮೊರಿನ್ ಪ್ರದೇಶಗಳಿಗೆ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಸಮುದ್ರದಲ್ಲಿರುವ ಮೀನುಗಾರರು ತಕ್ಷಣ ದಡ ಸೇರುವಂತೆ ಸೂಚನೆ ನೀಡಲಾಗಿದೆ.

ಮನ್ನಾರ್ ಕೊಲ್ಲಿ, ಬಂಗಾಳ ಕೊಲ್ಲಿ, ಅಂಡಮಾನ್ ಸಮುದ್ರ ಭಾಗಗಳಲ್ಲೂ ಹವಾಮಾನ ಅಸ್ಥಿರತೆಗೊಳ್ಳುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯ ಅಧಿಕೃತ ಸೂಚನೆ ಪಾಲಿಸಲು ಮನವಿ ಮಾಡಲಾಗಿದೆ. ಮೇ 20ರಿಂದ ಮೇ 25ರವರೆಗೆ ಸಮುದ್ರ ಭಾಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಕರ್ನಾಟಕ ಮತ್ತು ಕೇರಳ ಕರಾವಳಿ ತೀರದಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಸುಂಟರಗಾಳಿ ಬೀಸುವ ಸಾಧ್ಯತೆಯಿದ್ದು, ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗ ಗರಿಷ್ಠ 60 ಕಿ.ಮೀ.ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಲಕ್ಷದ್ವೀಪ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಸಮುದ್ರ ವ್ಯಾಪ್ತಿಯಲ್ಲಿ ಹವಾಮಾನ ಹದಗೆಡಲಿದ್ದು, ಸೊಮಾಲಿಯಾ ಕರಾವಳಿ ಹಾಗೂ ನೈಋತ್ಯ ಅರಬ್ಬಿ ಸಮುದ್ರದಲ್ಲಿ ಗಂಟೆಗೆ 45-55 ಕಿ.ಮೀ.ನಿಂದ 65 ಕಿ.ಮೀ ವೇಗದ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಬಂಗಾಳಕೊಲ್ಲಿ, ಮನ್ನಾರ್ ಕೊಲ್ಲಿ ಹಾಗೂ ಅಂಡಮಾನ್ ಸಮುದ್ರ ಭಾಗದಲ್ಲೂ ಮುಂದಿನ ಐದು ದಿನ ಪ್ರಕ್ಷುಬ್ಧ ವಾತಾವರಣ ಇರಲಿದ್ದು, ಶ್ರೀಲಂಕಾ ಕರಾವಳಿ ಹಾಗೂ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಗಂಟೆಗೆ 65 ಕಿ.ಮೀ ವೇಗದಲ್ಲಿ ಗಾಳಿ ಅಪ್ಪಳಿಸಲಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಕರ್ನಾಟಕ, ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ ಕರಾವಳಿ ರಾಜ್ಯಗಳಿಗೆ ತುರ್ತು ಸಂದೇಶ ರವಾನಿಸಲಾಗಿದೆ. ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ರಾಜ್ಯಗಳ ವಿಪತ್ತು ನಿರ್ವಹಣಾ ಕೇಂದ್ರಗಳಿಗೂ ಹೈ ಅಲರ್ಟ್ ಘೋಷಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia