Dailyhunt Logo
  • Light mode
    Follow system
    Dark mode
    • Play Story
    • App Story
'ನಿನ್ನ ನೆನಪಾಗ್ತಿದೆ ಅಪ್ಪಾ': ಮಧ್ಯರಾತ್ರಿಯ ಮಗಳ ಸಂದೇಶ ನೋಡಿ ಬೆಳಗ್ಗೆ ಬಾಗಿಲಲ್ಲೇ ನಿಂತಿದ್ದ ತಂದೆ !

'ನಿನ್ನ ನೆನಪಾಗ್ತಿದೆ ಅಪ್ಪಾ': ಮಧ್ಯರಾತ್ರಿಯ ಮಗಳ ಸಂದೇಶ ನೋಡಿ ಬೆಳಗ್ಗೆ ಬಾಗಿಲಲ್ಲೇ ನಿಂತಿದ್ದ ತಂದೆ !

ತಂದೆ-ಮಕ್ಕಳ ಬಾಂಧವ್ಯವೇ ಅಂತಹದ್ದು. ಮಕ್ಕಳಿಗೆ ಕಷ್ಟ ಎಂದಾಗ ಅಥವಾ ಅವರ ನೆನಪಾದಾಗ ತಂದೆಯ ಪ್ರೀತಿ ಎಲ್ಲ ಗಡಿಗಳನ್ನೂ ದಾಟಿ ಬರುತ್ತದೆ ಎಂಬುದಕ್ಕೆ ಸಾಕ್ಷಿಯಾದ ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಲಕ್ಷಾಂತರ ನೆಟ್ಟಿಗರ ಕಣ್ಣಂಚನ್ನು ಒದ್ದೆಯಾಗಿಸಿದೆ.

ಮಗಳು ಕಳುಹಿಸಿದ ಕೇವಲ ಒಂದೇ ಒಂದು ಭಾವನಾತ್ಮಕ ಸಂದೇಶವನ್ನು ನೋಡಿ, ಆಕೆಯನ್ನು ಭೇಟಿಯಾಗಲು ತಂದೆಯೊಬ್ಬರು ಬರೋಬ್ಬರಿ 14 ಗಂಟೆಗಳ ಕಾಲ ಸುದೀರ್ಘ ಪ್ರಯಾಣ ಬೆಳೆಸಿ ಬಂದು ನಿಂತಿರುವ ಅಪರೂಪದ ಪ್ರಸಂಗವಿದು.

ಮಧ್ಯರಾತ್ರಿಯ ಆ ಪುಟ್ಟ ಸಂದೇಶ: ಕೈವಲ್ಯ ಎಂಬ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ಅಪರೂಪದ ಕ್ಷಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಒಂದು ದಿನ ಮಧ್ಯರಾತ್ರಿ ಸುಮಾರು 1:50ರ ವೇಳೆಗೆ ಆಕೆಗೆ ತಂದೆಯ ನೆನಪು ತೀವ್ರವಾಗಿ ಕಾಡಿದೆ. ತಕ್ಷಣವೇ ಆಕೆ ತನ್ನ ತಂದೆ ಮುಕೇಶ್ ಅವರಿಗೆ ಅಪ್ಪ, ನಿನ್ನ ನೆನಪು ತುಂಬಾ ಕಾಡುತ್ತಿದೆ ಎಂದು ಮೆಸೇಜ್ ಕಳುಹಿಸಿ ಮಲಗಿದ್ದಾಳೆ.

ಆದರೆ, ಬೆಳಗ್ಗೆ ಎದ್ದು ಬಾಗಿಲು ತೆರೆದ ಆಕೆಗೆ ತನ್ನ ಕಣ್ಣನ್ನೇ ತನಗೆ ನಂಬಲು ಸಾಧ್ಯವಾಗಲಿಲ್ಲ. ಹೆಗಲ ಮೇಲೆ ಬ್ಯಾಗ್ ತೂಗುಹಾಕಿಕೊಂಡು ಸಾಕ್ಷಾತ್ ತಂದೆಯೇ ಬಾಗಿಲಲ್ಲಿ ನಿಂತಿದ್ದರು!

8 ಗಂಟೆಗಳಿಗಾಗಿ 28 ಗಂಟೆಗಳ ಜರ್ನಿ: ಮಗಳ ಸಂದೇಶವನ್ನು ನೋಡಿದ ತಕ್ಷಣವೇ ತಂದೆ ರಾತ್ರೋರಾತ್ರಿ ಪ್ರಯಾಣ ಆರಂಭಿಸಿದ್ದರು. ಮಗಳ ಜೊತೆ ಕೇವಲ ಸುಮಾರು 8 ಗಂಟೆಗಳ ಕಾಲ ಕಳೆಯಲು ಅವರು ಬರೋಬ್ಬರಿ 14 ಗಂಟೆ ಪ್ರಯಾಣಿಸಿ ಬಂದಿದ್ದರು. ಅಷ್ಟೇ ಅಲ್ಲ, ಮತ್ತೆ ಮರಳಿ ತೆರಳಲು ಇನ್ನೊಂದು 14 ಗಂಟೆ ಪ್ರಯಾಣಿಸಬೇಕಿತ್ತು.

ಬಂದ ಕೆಲವೇ ಗಂಟೆಗಳಲ್ಲಿ ತಂದೆ ತಮ್ಮ ಕಚೇರಿಯ ಕರೆಗಳನ್ನು ನಿಭಾಯಿಸುತ್ತಲೇ ಮಗಳನ್ನು ಬೈಕ್‌ನಲ್ಲಿ ಸುತ್ತಾಡಿಸಿದರು. ಬೌಲಿಂಗ್ ಆಟವಾಡಿ, ರೆಸ್ಟೋರೆಂಟ್‌ನಲ್ಲಿ ಆಕೆಗೆ ಇಷ್ಟವಾದ ಊಟ ಕೊಡಿಸಿದರು. ಕೇವಲ ಹೊರಗಡೆ ಸುತ್ತಾಡುವುದು ಮಾತ್ರವಲ್ಲದೆ, ಮಗಳ ಮನೆಯ ಅಡುಗೆ ಕೋಣೆಯಲ್ಲಿದ್ದ ಪಾತ್ರೆಗಳನ್ನು ತಾವೇ ಸ್ವತಃ ತೊಳೆದು, ಆಕೆಗೆ ಹೊರೆಯಾಗದಂತೆ ಸಣ್ಣಪುಟ್ಟ ಕೆಲಸಗಳನ್ನು ತಾವೇ ನಿಭಾಯಿಸಿ ಅಪಾರ ಕಾಳಜಿ ತೋರಿದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್: ಕೆಲವೇ ಗಂಟೆಗಳ ನೆನಪಿನ ಬುತ್ತಿಯೊಂದಿಗೆ ತಂದೆ ಮತ್ತೆ ಸ್ಲೀಪರ್ ಬಸ್ ಹತ್ತಿ ಮರಳುವ ದೃಶ್ಯದೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಕೈವಲ್ಯ, “ನಾನು ಕೇವಲ ‘ನಿನ್ನ ನೋಡಬೇಕು’ ಎಂದಷ್ಟೇ ಹೇಳಿದೆ, ಅವರು ಬಂದುಬಿಟ್ಟರು. 14 ಗಂಟೆಗಳ ಪ್ರಯಾಣ, ಜತೆಯಾಗಿ ಕಳೆದ ಒಂದು ದಿನ ಹಾಗೂ ನಾನು ಕೇಳದೆಯೇ ಅವರು ನನಗಾಗಿ ಮಾಡಿದ ಅಸಂಖ್ಯಾತ ಪುಟ್ಟ ವಿಷಯಗಳು… ತಂದೆ-ತಾಯಿ ಯಾವಾಗಲೂ 'ನಾನು ನಿನ್ನ ಜೊತೆಗಿದ್ದೇನೆ' ಎಂದು ಬಾಯಲ್ಲಿ ಹೇಳಬೇಕಿಲ್ಲ, ಕೆಲವೊಮ್ಮೆ ಅವರು ನಮ್ಮ ಮುಂದೆ ಪ್ರತ್ಯಕ್ಷರಾದರೆ ಸಾಕು. ನಾನೆಂದಿಗೂ ಒಂಟಿಯಲ್ಲ ಎಂಬುದನ್ನು ಅಪ್ಪ ನೆನಪಿಸಿದರು,” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಮಾತಿನಲ್ಲಿ ಹೇಳಲಾಗದ ಪ್ರೀತಿಯನ್ನು ಕೃತಿಯಲ್ಲಿ ತೋರಿಸಿದ ಈ ತಂದೆಯ ಪ್ರೀತಿಗೆ ಇಂಟರ್‌ನೆಟ್ ಮಾರುಹೋಗಿದ್ದು, ವಿಡಿಯೋಗೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia