ಅಬುಧಾಬಿ: ಅದೃಷ್ಟ ಎಂಬುದು ಯಾವಾಗ, ಯಾರನ್ನು, ಹೇಗೆ ಹುಡುಕಿಕೊಂಡು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಕಳೆದ 17 ವರ್ಷಗಳಿಂದ ದುಬೈನಲ್ಲಿ ಖಾಸಗಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರು ಅಬುಧಾಬಿ ಬಿಗ್ ಟಿಕೆಟ್ (Big Ticket) ಲಾಟರಿಯಲ್ಲಿ ಬರೋಬ್ಬರಿ 25 ಮಿಲಿಯನ್ ದಿರ್ಹಮ್ (ಸುಮಾರು 64.6 ಕೋಟಿ ರೂಪಾಯಿ) ಬಂಪರ್ ಬಹುಮಾನ ಗೆದ್ದಿದ್ದಾರೆ
6 ವರ್ಷಗಳ ಸತತ ಪ್ರಯತ್ನಕ್ಕೆ ಸಿಕ್ಕಿತು ಪ್ರತಿಫಲ
ಕೇರಳದ ಮಲಪ್ಪುರಂ ಜಿಲ್ಲೆಯ ಎಡಪ್ಪಲ್ ನಿವಾಸಿಯಾದ 48 ವರ್ಷದ ಅಬ್ದುಲ್ ರಶೀದ್, ಕಳೆದ ಆರು ವರ್ಷಗಳಿಂದ ನಿರಂತರವಾಗಿ ಬಿಗ್ ಟಿಕೆಟ್ ಲಾಟರಿ ಖರೀದಿಸುತ್ತಿದ್ದರು. ಏಪ್ರಿಲ್ 19 ರಂದು ಅವರು ಖರೀದಿಸಿದ್ದ 012318 ಸಂಖ್ಯೆಯ ಟಿಕೆಟ್‌ಗೆ ಈ ಬೃಹತ್ ಜ್ಯಾಕ್‌ಪಾಟ್ ಒಲಿದಿದೆ. ದುಬೈನ ರಶೀದಿಯಾ ಪ್ರದೇಶದಲ್ಲಿ ವಾಸವಿರುವ ಅವರು, ಗೆಳೆಯರೊಂದಿಗೆ ಸಮಯ ಕಳೆಯುತ್ತಿದ್ದಾಗ ಈ ಶುಭ ಸುದ್ದಿ ಕೇಳಿಬಂದಿದೆ.
27 ಗೆಳೆಯರ ಗುಂಪಿಗೆ ಹಂಚಿಕೆಯಾಗಲಿದೆ ಲಾಟರಿ ಹಣ
ಈ ಲಾಟರಿಯ ವಿಶೇಷವೆಂದರೆ, ಅಬ್ದುಲ್ ರಶೀದ್ ಒಬ್ಬರೇ ಈ ಟಿಕೆಟ್ ಖರೀದಿಸಿರಲಿಲ್ಲ. ರಶೀದಿಯಾ ಭಾಗದಲ್ಲಿ ಕೆಲಸ ಮಾಡುವ ಸುಮಾರು 27 ಗೆಳೆಯರು ಹಣವನ್ನು ಒಟ್ಟುಗೂಡಿಸಿ ಈ ಟಿಕೆಟ್ ಪಡೆದಿದ್ದರು.
ಈ ಗುಂಪಿನಲ್ಲಿ ಹೆಚ್ಚಿನವರು ಮಲಯಾಳಿಗಳಾಗಿದ್ದು, ಕೆಲವರು ಪಾಕಿಸ್ತಾನಿ ಮೂಲದವರೂ ಇದ್ದಾರೆ.ಮೇ 30 ರಂದು ಅಬ್ದುಲ್ ರಶೀದ್ ಅವರ ಜನ್ಮದಿನವಿರುವ ಕಾರಣ, ಈ ಬಾರಿ ಅವರ ಹೆಸರಿನಲ್ಲೇ ಟಿಕೆಟ್ ಖರೀದಿಸಲಾಗಿತ್ತು.ಈಗ ಬಂದಿರುವ 64.6 ಕೋಟಿ ರೂಪಾಯಿ ಮೊತ್ತವನ್ನು ಈ 27 ಗೆಳೆಯರು ಹಂಚಿಕೊಳ್ಳಲಿದ್ದಾರೆ.
ಕೋಟ್ಯಾಧಿಪತಿಯಾದರೂ ಕೆಲಸ ಬಿಡುವುದಿಲ್ಲ
ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿಯಾದರೂ ಅಬ್ದುಲ್ ರಶೀದ್ ಅವರು ಸದ್ಯಕ್ಕೆ ತಮ್ಮ ಡ್ರೈವರ್ ಕೆಲಸಕ್ಕೆ ರಾಜೀನಾಮೆ ನೀಡುವ ಯೋಚನೆ ಮಾಡಿಲ್ಲ. ನಾನು ತುಂಬಾ ಸಂತೋಷವಾಗಿದ್ದೇನೆ. ಮೊದಲು ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಚರ್ಚಿಸಿ, ಈ ಹಣವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ತೀರ್ಮಾನಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಅಬ್ದುಲ್ ಅವರ ಪತ್ನಿ ಸೋಹರಾ ಮತ್ತು ಇಬ್ಬರು ಪುತ್ರಿಯರು ಕೇರಳದಲ್ಲಿದ್ದಾರೆ.
ಕೇರಳದ ಮತ್ತೊಬ್ಬ ವ್ಯಕ್ತಿಗೆ ಒಲಿದ ಐಷಾರಾಮಿ ಲ್ಯಾಂಡ್ ರೋವರ್ ಕಾರ್
ಇದೇ ಡ್ರಾ ಸಂದರ್ಭದಲ್ಲಿ ಕೇರಳದ ಮತ್ತೊಬ್ಬ ವ್ಯಕ್ತಿಗೂ ಲಕ್ ಒಲಿದಿದೆ. ಅಬುಧಾಬಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ 41 ವರ್ಷದ ಅಶ್ರಫ್ ಅಬ್ದುಲ್ಲಾ ಅವರು ಡ್ರೀಮ್ ಕಾರ್ ವಿಭಾಗದಲ್ಲಿ ಅತ್ಯಂತ ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ (Land Rover Defender) ಕಾರನ್ನು ಗೆದ್ದಿದ್ದಾರೆ. ಅಶ್ರಫ್ ಕಳೆದ 9 ವರ್ಷಗಳಿಂದ ಈ ಲಾಟರಿಯಲ್ಲಿ ಭಾಗವಹಿಸುತ್ತಿದ್ದರು.
ಮುಂದಿನ ತಿಂಗಳ ಆಫರ್:
ಜೂನ್ ತಿಂಗಳ ಬಿಗ್ ಟಿಕೆಟ್ ಡ್ರಾದಲ್ಲಿ 20 ಮಿಲಿಯನ್ ದಿರ್ಹಮ್ (ಸುಮಾರು 45 ಕೋಟಿ ರೂ.) ಬಂಪರ್ ಬಹುಮಾನ ಇರಲಿದೆ ಎಂದು ಸಂಘಟಕರು ಘೋಷಿಸಿದ್ದಾರೆ.

