ಬೆಂಗಳೂರು: ಪಕ್ಕದ ಮನೆ ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಆರೋಪದ ಮೇರೆಗೆ ಖಾಸಗಿ ಕಂಪನಿ ಉದ್ಯೋಗಿಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗರುಡಾಚಾರ್ ಪಾಳ್ಯ ನಿವಾಸಿ ಕಾರ್ತಿಕ್ ಬಂಧಿತ ಆರೋಪಿ. ಆರೋಪಿಯ ಮೊಬೈಲ್ ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ನೆರೆಮನೆಯ ಮಹಿಳೆ ಸ್ನಾನ ಗೃಹದಲ್ಲಿದ್ದಾಗ ತನ್ನ ಮನೆಯ ಕಿಟಕಿಯಿಂದ ಕಾರ್ತಿಕ್ ವಿಡಿಯೋ ಮಾಡಿದ್ದು, ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಕಾರ್ತಿಕ್ ಮೂಲತಃ ತಮಿಳುನಾಡಿನವನಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಪತ್ನಿ ಬಾಣಂತನಕ್ಕೆ ತವರಿಗೆ ತೆರಳಿದ್ದರು. ಸಾಫ್ಟ್ವೇರ್ ಉದ್ಯೋಗಿಯಾಗಿರುವ ಸಂತ್ರಸ್ತ ಮಹಿಳೆ ಕೆಲವು ದಿನಗಳ ಹಿಂದೆ ಕಾರ್ತಿಕ್ ಮನೆ ಪಕ್ಕದ ಮನೆಗೆ ಬಾಡಿಗೆಗೆ ಬಂದಿದ್ದರು. ಮಹಿಳೆ ಸ್ನಾನ ಮಾಡುವಾಗ ಮನುಷ್ಯರ ನೆರಳು ಕಂಡು ಆತಂಕದಿಂದ ಕಿರುಚಾಡಿದ್ದಾರೆ. ಈ ವೇಳೆ ಕಾರ್ತಿಕ್ ಸ್ಥಳದಿಂದ ಪರಾರಿಯಾಗಿದ್ದ. ಈ ಕುರಿತಾಗಿ ಪೊಲೀಸರಿಗೆ ದೂರು ನೀಡಲಾಗಿದ್ದು, ಮಹದೇವಪುರ ಠಾಣೆ ಪೋಲೀಸರು ಆರೋಪಿಯನ್ನು ಬಂಧಿಸಿ, ಮೊಬೈಲ್ ಜಪ್ತಿ ಮಾಡಿ ತನಿಖೆ ಕೈಗೊಂಡಿದ್ದಾರೆ.

