Dailyhunt Logo
  • Light mode
    Follow system
    Dark mode
    • Play Story
    • App Story
ರಾಜ್ಯದ ಶಾಲಾ-ಕಾಲೇಜು ಕ್ರೀಡಾಪಟುಗಳಿಗೆ ಗುಡ್‌ನ್ಯೂಸ್: ಹಾಜರಾತಿಯಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ!

ರಾಜ್ಯದ ಶಾಲಾ-ಕಾಲೇಜು ಕ್ರೀಡಾಪಟುಗಳಿಗೆ ಗುಡ್‌ನ್ಯೂಸ್: ಹಾಜರಾತಿಯಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ!

ಬೆಂಗಳೂರು : ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕ್ರೀಡಾಪಟು ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಮಹತ್ವದ ಸೌಲಭ್ಯ ಘೋಷಿಸಿದೆ. ಕ್ರೀಡಾಪಟುಗಳು ತರಬೇತಿ ಪಡೆಯಲು ಹಾಗೂ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಶೇ.15ರಷ್ಟು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಶೇ.25ರಷ್ಟು ಹಾಜರಾತಿ ವಿನಾಯಿತಿ ನೀಡಲಾಗಿದೆ.

2025-26ನೇ ಸಾಲಿನ ಆಯವ್ಯಯದ ಕಂಡಿಕೆ-402ರಲ್ಲಿ ಮುಖ್ಯಮಂತ್ರಿ ಅವರು ಈ ಕುರಿತು ಘೋಷಣೆ ಮಾಡಿದ್ದರು. ಅದರಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಾರ್ಗಸೂಚಿಗಳನ್ನು ರೂಪಿಸಿದ್ದು, ಸರ್ಕಾರದ ಆದೇಶದ ಆಧಾರದ ಮೇಲೆ ಕಾಲೇಜು ಶಿಕ್ಷಣ ಇಲಾಖೆ ಸೆಪ್ಟೆಂಬರ್ 29, 2026ರಂದು ಸುತ್ತೋಲೆ ಹೊರಡಿಸಿದೆ.

ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನ್ವಯ

ಈ ಹಾಜರಾತಿ ವಿನಾಯಿತಿ ಶಾಲಾ-ಕಾಲೇಜುಗಳು ಹಾಗೂ ವೃತ್ತಿಪರ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಕ್ರೀಡಾಪಟುಗಳಿಗೆ ಅನ್ವಯವಾಗಲಿದೆ.

  • ರಾಜ್ಯ ಮಟ್ಟದ ಕ್ರೀಡಾಪಟುಗಳು - ಶೇ.15 ಹಾಜರಾತಿ ವಿನಾಯಿತಿ

  • ರಾಷ್ಟ್ರಮಟ್ಟದ ಕ್ರೀಡಾಪಟುಗಳು - ಶೇ.15 ಹಾಜರಾತಿ ವಿನಾಯಿತಿ

  • ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು - ಶೇ.25 ಹಾಜರಾತಿ ವಿನಾಯಿತಿ

ತರಬೇತಿ, ಕ್ರೀಡಾಕೂಟ, ಪ್ರಯಾಣಕ್ಕೂ ವಿನಾಯಿತಿ

ಕ್ರೀಡಾಕೂಟಗಳಿಗೆ ಮುನ್ನ ನಡೆಯುವ ಪೂರ್ವ ತಯಾರಿ ಶಿಬಿರ ಹಾಗೂ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಅವಧಿ, ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಧಿ ಮತ್ತು ಕ್ರೀಡಾಕೂಟಕ್ಕೆ ತೆರಳುವ ಹಾಗೂ ಹಿಂದಿರುಗುವ ಪ್ರಯಾಣದ ಅವಧಿಯನ್ನೂ ಹಾಜರಾತಿ ವಿನಾಯಿತಿಗೆ ಪರಿಗಣಿಸಲಾಗುತ್ತದೆ.

ಆದರೆ ಸರ್ಕಾರ ಮಾನ್ಯತೆ ನೀಡಿರುವ ಕ್ರೀಡೆಗಳು ಮತ್ತು ಕ್ರೀಡಾಕೂಟಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ.

34 ಕ್ರೀಡೆಗಳಿಗೆ ಮಾನ್ಯತೆ

ಸರ್ಕಾರದ ಅನುಬಂಧದಲ್ಲಿ ಹಾಜರಾತಿ ವಿನಾಯಿತಿಗೆ ಅರ್ಹವಾಗಿರುವ 34 ಕ್ರೀಡೆಗಳನ್ನು ಗುರುತಿಸಲಾಗಿದೆ. ರೋಯಿಂಗ್, ಶೂಟಿಂಗ್, ಸ್ಪೋರ್ಟ್ಸ್ ಕ್ಲೈಂಬಿಂಗ್, ಸ್ಕ್ವಾಷ್, ಟೇಬಲ್ ಟೆನ್ನಿಸ್, ಟೇಕ್ವಾಂಡೋ, ಟೆನ್ನಿಸ್, ಟ್ರಯಥ್ಲಾನ್, ವಾಲಿಬಾಲ್, ವೇಟ್‌ಲಿಫ್ಟಿಂಗ್, ಕುಸ್ತಿ ಸೇರಿದಂತೆ ವಿವಿಧ ಕ್ರೀಡೆಗಳು ಇದರಲ್ಲಿ ಸೇರಿವೆ.

ಅಧಿಕೃತವಾಗಿ ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು (NSF), ಭಾರತೀಯ ಒಲಿಂಪಿಕ್ ಸಂಸ್ಥೆ (IOA), ಭಾರತೀಯ ವಿಶ್ವವಿದ್ಯಾಲಯಗಳ ಸಂಘ (AIU), ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಬಂಧಿತ ಕ್ರೀಡಾ ಇಲಾಖೆಗಳು ಆಯೋಜಿಸುವ ನಿರ್ದಿಷ್ಟ ಕ್ರೀಡಾಕೂಟಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

ಕನಿಷ್ಠ ಹಾಜರಾತಿಗೆ ಹೆಚ್ಚುವರಿಯಾಗಿ ವಿನಾಯಿತಿ

ಪ್ರಮುಖವಾಗಿ, ಈ ಹಾಜರಾತಿ ವಿನಾಯಿತಿಯು ಶಿಕ್ಷಣ ಸಂಸ್ಥೆಗಳು ಪರೀಕ್ಷೆಗೆ ನಿಗದಿಪಡಿಸಿರುವ ಕನಿಷ್ಠ ಹಾಜರಾತಿಗೆ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಅಂದರೆ, ಕ್ರೀಡಾಪಟುಗಳಿಗೆ ನಿಗದಿತ ಕನಿಷ್ಠ ಹಾಜರಾತಿ ನಿಯಮದ ಮೇಲೆ ಹೆಚ್ಚುವರಿ ವಿನಾಯಿತಿ ಪಡೆಯಲು ಅವಕಾಶವಿದೆ.

ಹಾಜರಾತಿ ವಿನಾಯಿತಿ ನೀಡಲು ಪ್ರತಿ ಶಿಕ್ಷಣ ಸಂಸ್ಥೆಯು ಸಕ್ಷಮ ಪ್ರಾಧಿಕಾರ ಮತ್ತು ಮೇಲ್ಮನವಿ ಪ್ರಾಧಿಕಾರವನ್ನು ನಿಗದಿಪಡಿಸಬೇಕು. ವಿನಾಯಿತಿ ನೀಡುವ ಪ್ರಾಧಿಕಾರದ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪದಕ ವಿಜೇತರಿಗೆ ಶೇ.5 ಕೃಪಾಂಕ

ಇದರ ಜೊತೆಗೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ವೃತ್ತಿಪರ, ಪದವಿ ಹಾಗೂ ಉನ್ನತ ಶಿಕ್ಷಣದ ಪ್ರವೇಶದಲ್ಲಿ ಶೇ.5ರಷ್ಟು ಕೃಪಾಂಕ ನೀಡುವ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಈ ಮೂಲಕ ಕ್ರೀಡೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ತರಬೇತಿ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಅವರ ಶೈಕ್ಷಣಿಕ ಹಾಜರಾತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.

ಆದೇಶ

 Official Documents / Supporting Documents

Dailyhunt
Disclaimer: This content has not been generated, created or edited by Dailyhunt. Publisher: Kannada Dunia