ಬೆಂಗಳೂರು: ಎದೆ ನೋವು ಕಾಣಿಸಿಕೊಂಡು ನಡು ರಸ್ತೆಯಲ್ಲಿ ಕುಸಿದು ಬಿದ್ದಿದ್ದ ವ್ಯಕ್ತಿಯನ್ನು ಸಿಪಿಆರ್ ಮಾಡಿ ಪೊಲೀಸರು ಜೀವ ಉಳಿಸಿದ್ದಾರೆ.
ರವಿ(34) ಅವರು ಶನಿವಾರ ಬೆಳಗ್ಗೆ 8:30ರ ಸುಮಾರಿಗೆ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಅಗ್ನಿಶಾಮಕ ಠಾಣೆಯ ಸಮೀಪ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ.
ಕೂಡಲೇ ಅವರು ತಮ್ಮ ಸ್ಕೂಟರನ್ನು ರಸ್ತೆ ಬದಿ ನಿಲ್ಲಿಸಿ ಕುಸಿದುಬಿದ್ದಿದ್ದಾರೆ. ಅದೇ ರಸ್ತೆಯಲ್ಲಿ ಗಸ್ತಿನಲ್ಲಿದ್ದ ಹೊಯ್ಸಳ ಪೊಲೀಸ್ ಸಿಬ್ಬಂದಿ ಎಎಸ್‌ಐ ಸಚ್ಚಿದಾನಂದ ಮೂರ್ತಿ ಮತ್ತು ಕಾನ್ಸ್ ಟೇಬಲ್ ಬಸವರಾಜು ಅವರು ರವಿಯವರ ನೆರವಿಗೆ ಧಾವಿಸಿದ್ದಾರೆ.
ಕೂಡಲೇ ಸಿಪಿಆರ್ ಮಾಡಿ ಅವರ ಜೀವಗೊಳಿಸಿದ್ದಾರೆ. ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಸ್ತೆ ಬದಿ ಬಿದ್ದಿದ್ದ ರವಿಗೆ ಸಿಪಿಆರ್ ಮಾಡಿ ಪ್ರಾಣ ಉಳಿಸಿದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಶ್ಲಾಘಿಸಿದ್ದಾರೆ.

