ಶಿವಮೊಗ್ಗ: ಸೇವಾ ನ್ಯೂನ್ಯತೆ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿವಮೊಗ್ಗದ ವಾಹನ ಮಾರಾಟ ಸಂಸ್ಥೆಯೊಂದರ ವ್ಯವಸ್ಥಾಪಕರಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿ ತೀರ್ಪು ನೀಡಿದೆ.
ಭದ್ರಾವತಿಯ ಮನೋಜ್ ಕುಮಾರ್ ಎ.ಸಿ. ಎಂಬುವವರು ಶಿವಮೊಗ್ಗದ ಮಹಾಂತ್ ಮೋಟಾರ್ಸ್ ವ್ಯವಸ್ಥಾಪಕರ ವಿರುದ್ಧ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಸಲ್ಲಿಸಿದ ಸೇವಾನ್ಯೂನ್ಯತೆ ದೂರನ್ನು ಭಾಗಶಃ ಪುರಸ್ಕರಿಸಿ ಮುಂಗಡ ಪಾವತಿಸಿದ ಹಣಕ್ಕೆ ಬಡ್ಡಿ ಹಾಗೂ ದಂಡವಿಧಿಸಿ ಆಯೋಗ ಆದೇಶ ನೀಡಿದೆ.
ಫೆಬ್ರವರಿ 2026ರಲ್ಲಿ ಮಹಾಂತ್ ಮೋಟಾರ್ಸ್ ನಲ್ಲಿ ಮಹೇಂದ್ರ ಎಕ್ಸ್.ಯು.ವಿ. 3ಎಕ್ಸ್‌ಓ ಎಎಕ್ಸ್5 ಡೀಸೆಲ್ ಎಎಂಟಿ ಎಂಬ ವಾಹನವನ್ನು ಖರೀದಿಸಲು ರೂ.21,000 ಮುಂಗಡ ಪಾವತಿಸಿ, ತಮ್ಮ ಹಳೆಯ ವಾಹನವನ್ನು ಒಂದು ಲಕ್ಷದ ಎಪ್ಪತ್ತು ಸಾವಿರ ಮೌಲ್ಯಕ್ಕೆ ಎಕ್ಸ್ ಚೇಂಜ್ ಆಫರ್ ಅನ್ವಯ ವಾಹನವನ್ನು ಹಸ್ತಾಂತರಿಸಿದ್ದು, 30 ರಿಂದ 35 ದಿನದೊಳಗಾಗಿ ಹೊಸ ವಾಹನವನ್ನು ನೀಡಲು ಎದುರುದಾರರು ಒಪ್ಪಿಕೊಂಡಿರುತ್ತಾರೆ. ಆದರೆ ಹೇಳಿದ ಅವಧಿಯಲ್ಲಿ ವಾಹನ ನೀಡದೇ ಸತಾಯಿಸಿದ್ದು, ಏಪ್ರಿಲ್ 27 ರಂದು ವಾಹನದ ಬುಕಿಂಗ್ ರದ್ಧುಪಡಿಸಿ, ಮುಂಗಡ ಪಾವತಿಯ ಮೊತ್ತ ಮತ್ತು ಹಳೆಯ ವಾಹನದ ಎಕ್ಸ್ ಚೇಂಜ್ ಆಫರ್ ಮೌಲ್ಯದ ಮೊತ್ತವನ್ನು ಬಡ್ಡಿಸಹಿತವಾಗಿ ಹಿಂತಿರುಗಿಸಲು ಹಾಗೂ ಸೇವಾ ನ್ಯೂನ್ಯತೆಗೆ ಪರಿಹಾರ ಮತ್ತು ಕೋರ್ಟ್ ವೆಚ್ಚ ಪಾವತಿಸಲು ಕೇಳಿದ್ದು, ಎದುರುದಾರರು ಮೇ 04 ರಂದು ಹಣವನ್ನು ಹಿಂತಿರುಗಿಸಿರುತ್ತಾರೆ. ದೂರುದಾರರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದ್ದು, ಎದುರುದಾರರು ಭರವಸೆ ನೀಡಿದ ದಿನಾಂಕದ ಒಳಗೆ ವಾಹನವನ್ನು ನೀಡದೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ದೂರು ಸಲ್ಲಿಸಿರುತ್ತಾರೆ.
ದೂರನ್ನು ದಾಖಲಿಸಿಕೊಂಡ ಆಯೋಗವು ಎದುರುದಾರರಿಗೆ ನೋಟೀಸ್ ನೀಡಿದ್ದು, ಎದುರುದಾರರು ಹಾಜರಾಗದೇ ಇರುವುದರಿಂದ ಆಯೋಗವು ದೂರುದಾರರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ವಾದವನ್ನು ಆಲಿಸಿ, ಎದುರುದಾರರು ದೂರುದಾರರಿಗೆ ಹೇಳಿರುವ ದಿನಗಳ ಒಳಗೆ ವಾಹವನ್ನು ನೀಡಿದ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಏಕಪಕ್ಷೀಯವಾಗಿ ತೀರ್ಮಾನಿಸಿ, ದೂರುದಾರರು ಪಾವತಿಸಿದ ಮುಂಗಡ ಮೊತ್ತ ರೂ. 21,000/- ಕ್ಕೆ ಫೆ. 27 ರಿಂದ ವಾರ್ಷಿಕ ಶೇ. 8ರ ಬಡ್ಡಿ ಸೇರಿಸಿ ಆದೇಶದ ದಿನಾಂಕದಿಂದ 45 ದಿನದೊಳಗೆ ಪಾವತಿಸಲು, ಮತ್ತು ರೂ. 25,000/-ಗಳನ್ನು ಮಾನಸಿಕ ವೇದನೆಗಾಗಿ ಹಾಗೂ ರೂ. 10000/- ಗಳನ್ನು ವ್ಯಾಜ್ಯದ ವೆಚ್ಚಕ್ಕಾಗಿ ಈ ಆದೇಶದ ದಿನಾಂಕದಿಂದ 45 ದಿನದೊಳಗೆ ಪಾವತಿಸಲು, ತಪ್ಪಿದ್ದಲ್ಲಿ ಈ ಎಲ್ಲಾ ಮೊತ್ತಕ್ಕೆ ವಾರ್ಷಿಕ ಶೇ. 10 ರ ಬಡ್ಡಿ ಸೇರಿಸಿ, ಪೂರ್ತಿ ಹಣ ಪಾವತಿಸತಕ್ಕದ್ದೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ. ಶಿವನ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯರವರ ಪೀಠವು ಆ. 13 ರಂದು ಆದೇಶಿಸಿದೆ.

