ಕನ್ನಡದುನಿಯಾ

1.6M Followers

ಶಾಲೆ ಆರಂಭಕ್ಕೆ ಮೊದಲೇ ಬಿಗ್ ಶಾಕ್: ಕಾಗದ ಕೊರತೆಯಿಂದ ಪಠ್ಯಪುಸ್ತಕ ಮುದ್ರಣ ಸ್ಥಗಿತ.? ಶಾಲೆ ಶುರುವಾದ್ರೂ ಪುಸ್ತಕ ವಿಳಂಬ ಸಾಧ್ಯತೆ

05 May 2022.6:26 PM

ಬೆಂಗಳೂರು: ರಾಜ್ಯದಲ್ಲಿ ಮೇ 16 ರಿಂದ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳ ಕೈಗೆ ನಿಗದಿತ ಅವಧಿಯೊಳಗೆ ಪಠ್ಯಪುಸ್ತಕಗಳು ತಲುಪುವುದು ಅನುಮಾನವೆನ್ನಲಾಗಿದೆ. ಮುದ್ರಣ ಕಾಗದದ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳ ಕಾರಣದಿಂದಾಗಿ ರಾಜ್ಯದಲ್ಲಿ ಹಲವಾರು ಪಠ್ಯಪುಸ್ತಕ ಮುದ್ರಣಾಲಯಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿವೆ ಎನ್ನಲಾಗಿದೆ.

ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಮುದ್ರಣ ಕಾಗದ ಕೊರತೆ ಕಂಡುಬಂದಿದೆ. ಇದರಿಂದ ಭಾರತದಲ್ಲಿಯೂ ಮುದ್ರಣ ಕಾಗದ ತಯಾರಿಸುವ ಕಾರ್ಖಾನೆಗಳ ಮೇಲೆ ಪರಿಣಾಮ ಉಂಟಾಗಿದೆ. ರಾಜ್ಯದಲ್ಲಿ ಪಠ್ಯ ಪುಸ್ತಕ ಮುದ್ರಣ ಮಾಡುವ ಮುದ್ರಕರಿಗೆ ಮುದ್ರಣ ಕಾಗದ ಕೊರತೆ ಎದುರಾಗಿದೆ. ಹೀಗಾಗಿ ನಿಗದಿತ ಅವಧಿಯೊಳಗೆ ಪಠ್ಯ ಪುಸ್ತಕಗಳನ್ನು ಮುದ್ರಿಸಿ ತಲುಪಿಸುವುದು ಮುದ್ರಕರಿಗೆ ಕಷ್ಟಸಾಧ್ಯವಾಗಿದೆ. ಬೇಡಿಕೆಯಷ್ಟು ಮುದ್ರಣ ಕಾಗದ ಪೂರೈಕೆಯಾಗದೆ ಇರುವುದರಿಂದ ಪಠ್ಯಪುಸ್ತಕಗಳನ್ನು ಮುದ್ರಿಸಲು ಸಾಧ್ಯವಾಗದೆ ಅನೇಕರು ತಾತ್ಕಾಲಿಕವಾಗಿ ಮುದ್ರಣ ಸ್ಥಗಿತಗೊಳಿಸಿದ್ದಾರೆ.

ಕರ್ನಾಟಕ ಪಠ್ಯಪುಸ್ತಕ ಮುದ್ರಕರ ಸಂಘದ ಅಧ್ಯಕ್ಷ ಬಿ.ಆರ್. ಸತ್ಯಕುಮಾರ್ ಅವರು, ಪರಿಸ್ಥಿತಿ ಸುಧಾರಿಸದಿದ್ದರೆ ಪಠ್ಯಪುಸ್ತಕ ಪೂರೈಕೆಯ ಮೇಲೆ ಪರಿಣಾಮ ಉಂಟಾಗಲಿದೆ. ಶೇಕಡ 50 ರಷ್ಟು ಮುದ್ರಣ ಕಾರ್ಯ ಪೂರ್ಣಗೊಂಡಿದೆ. ಕಾಗದ ಸರಬರಾಜು ನಿಯಮಿತವಾಗಿ ಪೂರೈಕೆಯಾದಲ್ಲಿ ಶೈಕ್ಷಣಿಕ ವರ್ಷಕ್ಕೆ ಶಾಲೆಗಳು ತೆರೆಯುವ ವೇಳೆಗೆ ಮುದ್ರಣ ಪೂರ್ಣಗೊಳಿಸಿ ಪಠ್ಯಪುಸ್ತಕ ಪೂರೈಕೆ ಮಾಡಬಹುದಾಗಿದೆ. ಆದರೆ, ಮುದ್ರಣ ಕಾಗದ ಬೆಲೆ ಶೇಕಡ 40 ರಷ್ಟು ಹೆಚ್ಚಾಗಿದೆ. ಪಠ್ಯಪುಸ್ತಕ ಮುದ್ರಕರು ಟೆಂಡರ್ ಕರೆದಾಗ ಪ್ರತಿಟನ್ ಗೆ 60 ಸಾವಿರ ರೂ. ಇದ್ದ ಮುದ್ರಣ ಕಾಗದ ದರ 90 ಸಾವಿರ ರೂ.ಗೆ ತಲುಪಿದೆ.

ರಾಜ್ಯದಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸುವ ಸುಮಾರು 21 ಘಟಕಗಳಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಮಿಳುನಾಡು ಸರ್ಕಾರಿ ಸ್ವಾಮ್ಯದ ಕಾಗದ ಕಾರ್ಖಾನೆಯಿಂದ ರಾಜ್ಯಕ್ಕೆ ಕಾಗದ ಪೂರೈಕೆ ಮಾಡಲು ಕ್ರಮ ಕೈಗೊಂಡಲ್ಲಿ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಹೇಳಲಾಗಿದೆ.

ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ನೀಡಿರುವ ಮಾಹಿತಿಯಂತೆ, ಶೇಕಡಾ 64 ರಷ್ಟು ಪಠ್ಯಪುಸ್ತಕಗಳ ಮುದ್ರಣವಾಗಿದ್ದು, 57ರಷ್ಟು ಪಠ್ಯಪುಸ್ತಕಗಳನ್ನು ವಿತರಣೆಗೆ ತಲುಪಿಸಲಾಗಿದೆ. ಮೇ 16ರಿಂದ 20ರೊಳಗೆ ಎಲ್ಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ಆದರೆ, ಮುದ್ರಣ ಕಾಗದ ಪೂರೈಕೆಯಾಗದೇ ಮುದ್ರಕರು ಮುದ್ರಣ ಕಾರ್ಯ ತಾತ್ಕಾಲಿಕವಾಗಿ ನಿಲ್ಲಿಸಿರುವುದರಿಂದ ನಿಗದಿತ ವೇಳೆಗೆ ಪಠ್ಯ ಪುಸ್ತಕ ಪೂರೈಕೆಯಾಗುವುದು ಅನುಮಾನವೆನ್ನಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags