Monday, 21 Jun, 7.42 pm ಕನ್ನಡದುನಿಯಾ

ಹೋಮ್
ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್ಡೌನ್ ಇನ್ನಷ್ಟು ಸಡಿಲ: ಕಂಟೈನ್ ಮೆಂಟ್ ವಲಯದಲ್ಲಿ ನಿರ್ಬಂಧ; ಜಿಲ್ಲಾಧಿಕಾರಿ ಮಾಹಿತಿ

ಶಿವಮೊಗ್ಗ: ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಲಾಕ್‍ಡೌನ್ ಇನ್ನಷ್ಟು ಸಡಿಲಿಕೆ ಮಾಡಲಾಗಿದ್ದು, ಎಲ್ಲಾ ರೀತಿಯ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ಈ ಆದೇಶ ಜುಲೈ 5 ರ ಬೆಳಿಗ್ಗೆ 5 ಗಂಟೆವರೆಗೆ ಜಾರಿಯಲ್ಲಿರಲಿದೆ. ಕಂಟೈನ್‍ಮೆಂಟ್ ವಲಯದಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಹವಾನಿಯಂತ್ರಿತ ಅಂಗಡಿಗಳು, ಶಾಪಿಂಗ್ ಕಾಪ್ಲೆಂಕ್ಸ್ ಗಳು, ಮಾಲ್‍ಗಳಿಗೆ ಅನುಮತಿ ನೀಡಲಾಗಿಲ್ಲ. ಎಲ್ಲಾ ವಸ್ತುಗಳ ಹೋಂ ಡೆಲಿವರಿಗೆ ಸಂಪೂರ್ಣ ಅವಕಾಶ ನೀಡಲಾಗಿದೆ. ಎಲ್ಲಾ ರೀತಿಯ ಕೈಗಾರಿಕೆಗಳಿಗೆ ಶೇ.50 ರಷ್ಟು ಸಿಬ್ಬಂದಿ ಬಳಸಿಕೊಂಡು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಆದರೆ, ಗಾರ್ಮೆಂಟ್ ಕೈಗಾರಿಕೆ ಶೇ.30 ರಷ್ಟು ಸಿಬ್ಬಂದಿ ಮಾತ್ರ ಬಳಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಹೊಟೇಲ್, ರೆಸ್ಟೋರೆಂಟ್, ಬಾರ್ ಗಳು ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ಶೇ. 50 ರಷ್ಟು ಸಾಮರ್ಥ್ಯವನ್ನು ಬಳಸಿಕೊಂಡು ವಹಿವಾಟು ನಡೆಸಬಹುದು. ಆದರೆ, ಮದ್ಯವನ್ನು ಸ್ಥಳದಲ್ಲಿಯೇ ಸೇವಿಸಲು ಅವಕಾಶವಿರುವುದಿಲ್ಲ. ಹವಾನಿಯಂತ್ರಿತ ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ಕ್ಲಬ್‍ಗಳಿಗೆ ಅವಕಾಶವಿರುವುದಿಲ್ಲ. ಲಾಡ್ಜ್, ರೆಸಾರ್ಟ್‍ಗಳು ಸಹ ಶೇ.50 ರ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು. ಎಲ್ಲಾ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಪಾರ್ಕ್‍ಗಳಲ್ಲಿ ಬೆಳಿಗ್ಗೆ 5 ರಿಂದ ಸಂಜೆ 6 ರವರೆಗೆ ವಾಕಿಂಗ್ ಮತ್ತು ಜಾಗಿಂಗ್‍ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಎಸಿ ಇಲ್ಲದ ಜಿಮ್‍ಗಳು ಶೇ.50 ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದಾಗಿದೆ. ಎಲ್ಲಾ ಹೊರಾಂಗಣ ಕ್ರೀಡೆಗಳಿಗೆ ಅನುಮತಿಸಲಾಗಿದ್ದು, ಪ್ರೇಕ್ಷಕರು ಸೇರುವಂತಿಲ್ಲ.

ಪ್ರತಿ ದಿನ ರಾತ್ರಿ 7 ರಿಂದ ಮರುದಿನ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಕಟ್ಟುನಿಟ್ಟಿನಿಂದ ಜಾರಿಯಲ್ಲಿರಲಿದೆ. ಈ ಸಂದರ್ಭದಲ್ಲಿ ಅವಶ್ಯಕ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ವೈದ್ಯಕೀಯ, ಸರಕು ಸಾಗಾಣಿಕೆ ವಾಹನಗಳ ಸಂಚಾರ, ಬಸ್, ರೈಲು ಸಂಚಾರ, ಹೋಂ ಡೆಲಿವರಿ ಇತ್ಯಾದಿ ಅವಶ್ಯಕ ಚಟುವಟಿಕೆಗಳಿಗೆ ಅವಕಾಶವಿರುವುದು. ಇದೇ ರೀತಿ ವಾರಾಂತ್ಯದಲ್ಲಿ ಅಂದರೆ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ಜಾರಿಯಲ್ಲಿರುವುದು.

ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿದ್ದರೂ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು ಕಡ್ಡಾಯವಾಗಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ಅವರು ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top