Dailyhunt Logo
  • Light mode
    Follow system
    Dark mode
    • Play Story
    • App Story
ಶಿವಣ್ಣ-ಡಾಲಿ ಕಾಂಬಿನೇಷನ್‌ನ 666 ಆಪರೇಷನ್ ಡ್ರೀಮ್ ಥಿಯೇಟರ್ ಟೀಸರ್ ಔಟ್: ರೆಟ್ರೋ ಸ್ಟೈಲ್‌ನಲ್ಲಿ ಅಬ್ಬರಿಸಿದ ಏಜೆಂಟ್ಸ್

ಶಿವಣ್ಣ-ಡಾಲಿ ಕಾಂಬಿನೇಷನ್‌ನ 666 ಆಪರೇಷನ್ ಡ್ರೀಮ್ ಥಿಯೇಟರ್ ಟೀಸರ್ ಔಟ್: ರೆಟ್ರೋ ಸ್ಟೈಲ್‌ನಲ್ಲಿ ಅಬ್ಬರಿಸಿದ ಏಜೆಂಟ್ಸ್

ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್‌ ಮತ್ತು ನಟ ರಾಕ್ಷಸ ಡಾಲಿ ಧನಂಜಯ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ʻ666 ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರದ ಮೊದಲ ಅಧಿಕೃತ ಟೀಸರ್ ಬಿಡುಗಡೆಯಾಗಿದೆ.

ಸಪ್ತಸಾಗರದಾಚೆ ಎಲ್ಲೊ’ ಖ್ಯಾತಿಯ ಹೇಮಂತ್‌ ಎಂ. ರಾವ್‌ ನಿರ್ದೇಶನದ ಈ ಚಿತ್ರವು ರೆಟ್ರೋ ಕಾಲದ ಸ್ಪೈ (Spy-Thriller) ಕಥಾಹಂದರ ಹೊಂದಿದ್ದು, ಟೀಸರ್ ಮೂಲಕವೇ ಸಿನಿರಸರಲ್ಲಿ ಭಾರಿ ಕುತೂಹಲ ಕೆರಳಿಸಿದೆ.

ಸುಮಾರು ಎರಡು ನಿಮಿಷಗಳ ಅವಧಿಯ ಈ ಟೀಸರ್, ಚಿತ್ರದ ಕಥೆಯನ್ನು ಸಂಪೂರ್ಣವಾಗಿ ಬಿಟ್ಟುಕೊಡದೆ ಪತ್ತೇದಾರಿ ಪ್ರಪಂಚದ ರಹಸ್ಯ ನೋಟವನ್ನಷ್ಟೇ ಪ್ರೇಕ್ಷಕರ ಮುಂದೆ ಇಟ್ಟಿದೆ. ಸ್ಟೈಲಿಶ್ ಹಾಗೂ ರೆಟ್ರೋ ಶೈಲಿಯಲ್ಲಿ ಮೂಡಿಬಂದಿರುವ ಈ ಝಲಕ್‌ನಲ್ಲಿ ಡಾ. ಶಿವರಾಜ್‌ಕುಮಾರ್ ಅವರು ಏಜೆಂಟ್ ಪ್ರಕಾಶ್ ಆಗಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.ಡಾಲಿ ಧನಂಜಯ ಅವರು ಏಜೆಂಟ್ ಶಂಕರ್ ಆಗಿ ಶಿವಣ್ಣನಿಗೆ ಸಾಥ್ ನೀಡಿದ್ದಾರೆ.

ರಹಸ್ಯ ಕಾರ್ಯಾಚರಣೆಯ ಹಿನ್ನೆಲೆಯುಳ್ಳ ಈ ಚಿತ್ರದಲ್ಲಿ ಗನ್‌ಫೈಟ್‌ಗಳು, ಸ್ಫೋಟಗಳು ಮತ್ತು ರೋಮಾಂಚಕ ಚೇಸಿಂಗ್ ದೃಶ್ಯಗಳು ಹೈಲೈಟ್ ಆಗಿವೆ. ಅದ್ವೈತ್ ಗುರುಮೂರ್ತಿ ಅವರ ಅದ್ಭುತ ಛಾಯಾಗ್ರಹಣ ಹಾಗೂ ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಟೀಸರ್‌ನ ಮೂಡ್ ಅನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ವಿಶೇಷವಾಗಿ, ಟೀಸರ್‌ನ ಹಲವು ದೃಶ್ಯಗಳಲ್ಲಿ ಶಿವಣ್ಣ ಅವರ ಲುಕ್ ಮತ್ತು ಸ್ಟೈಲಿಂಗ್, ಅವರ ತಂದೆ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಕ್ಲಾಸಿಕ್ ಬಾಂಡ್ ಸಿನಿಮಾಗಳಾದ ‘ಆಪರೇಷನ್ ಡೈಮಂಡ್ ರ‍್ಯಾಕೆಟ್’ ದಿನಗಳನ್ನು ನೆನಪಿಸುವಂತಿದೆ.

“ನಾನು ಡಿಸೆಂಟ್ ಬಾಂಡ್” – ಶಿವಣ್ಣ:ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್,

“ಹೇಮಂತ್ ಒಬ್ಬ ಅದ್ಭುತ ನಿರ್ದೇಶಕ. ಧನಂಜಯ್ ಜೊತೆ ಇದು ನನ್ನ 3ನೇ ಹಾಗೂ ಪ್ರಿಯಾಂಕಾ ಜೊತೆ 2ನೇ ಸಿನಿಮಾ. ಸಾಮಾನ್ಯವಾಗಿ ಬಾಂಡ್ ಸಿನಿಮಾಗಳಲ್ಲಿ ಈಜುಕೊಳ, ಹುಡುಗಿಯರು ಇರುತ್ತಾರೆ. ಆದರೆ ಈ ಚಿತ್ರದಲ್ಲಿ ನಾನು ಆ ರೀತಿಯ ಬಾಂಡ್ ಅಲ್ಲ, ಬದಲಿಗೆ ಎಲ್ಲರನ್ನೂ ಒಟ್ಟಿಗೆ ಜೋಡಿಸುವ ‘ಡಿಸೆಂಟ್ ಬಾಂಡ್’. ಚಿತ್ರದಲ್ಲಿ ಹೊಸ ವೇಷ ಧರಿಸಿದಾಗ ಆ ಅಟಿಡ್ಯೂಡ್ ಮತ್ತು ಸ್ವಾಗ್ ತಾನಾಗಿಯೇ ಬರುತ್ತದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ಹಲವು ಸರ್ಪ್ರೈಸ್‌ಗಳಿವೆ ಎಂದ ಡಾಲಿ ಧನಂಜಯ್

ನಿರ್ಮಾಪಕ ವೈಶಾಖ್ ಅವರಿಗೆ ಸ್ಯಾಂಡಲ್‌ವುಡ್‌ಗೆ ಆತ್ಮೀಯ ಸ್ವಾಗತ. ಹೇಮಂತ್ ಅವರು ಮಗು ರಚ್ಚೆ ಹಿಡಿದು ಕೆಲಸ ಮಾಡಿಸಿಕೊಳ್ಳುವ ರೀತಿ ನಟರಿಂದ ಕೆಲಸ ತೆಗಿಸಿಕೊಳ್ಳುತ್ತಾರೆ, ಅವರಿಂದ ತುಂಬಾ ಕಲಿತಿದ್ದೇನೆ. ಶಿವಣ್ಣ ನನಗೆ ಯಾವಾಗಲೂ ದೊಡ್ಡ ಶಕ್ತಿ. ಇದು ಕೇವಲ ಟೀಸರ್ ಅಷ್ಟೇ, ಸಿನಿಮಾದಲ್ಲಿ ಪ್ರೇಕ್ಷಕರಿಗೆ ಭಾರಿ ಸರ್ಪ್ರೈಸ್‌ಗಳು ಕಾದಿವೆ ಎಂದಿದ್ದಾರೆ ನಟ ಧನಂಜಯ್.

10 ವರ್ಷಗಳ ಹುಡುಕಾಟಕ್ಕೆ ಸಿಕ್ಕ ಪ್ರತಿಫಲ: ನಿರ್ದೇಶಕ ಹೇಮಂತ್ ರಾವ್

ನಿರ್ದೇಶಕ ಹೇಮಂತ್ ಎಂ. ರಾವ್ ಮಾತನಾಡಿ, “ಒಬ್ಬ ಸರಿಯಾದ ನಿರ್ಮಾಪಕರಿಗಾಗಿ ನಾನು ಕಳೆದ 10 ವರ್ಷಗಳಿಂದ ಒದ್ದಾಡಿದ್ದೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕೆ ಅಪ್ಪನ ಸಹಾಯ ಪಡೆದಿದ್ದೆ. ಈಗ ವೈಶಾಖ್ ಅವರಂತಹ ಬೆಂಬಲ ನೀಡುವ ನಿರ್ಮಾಪಕರು ಸಿಕ್ಕಿದ್ದಾರೆ. ನಮ್ಮ ಸೆಟ್‌ಗೆ ಆನೆಬಲ ತಂದಿರುವುದು ಶಿವಣ್ಣ. ಅವರ ಕೆಲಸದ ಮೇಲಿನ ಆಸಕ್ತಿ ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಇದೀಗ ಚಿತ್ರದ ಸಣ್ಣ ಭಾಗವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದೇವೆ” ಎಂದರು.

ಅದ್ಧೂರಿ ತಾರಾಗಣ, ತಾಂತ್ರಿಕ ಶ್ರೀಮಂತಿಕೆ

ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಕ್ ಜೆ. ಗೌಡ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ, ಧನಂಜಯ್ ಜೊತೆಗೆ ಪ್ರಿಯಾಂಕ ಮೋಹನ್, ಅದಿತಿ ಬಾಲನ್ ಹಾಗೂ ಸುಖ್ವಿಂದರ್ ಸಿಂಗ್ ಒಳಗೊಂಡ ದೊಡ್ಡ ತಾರಾಗಣವಿದೆ.

ತಾಂತ್ರಿಕ ಬಳಗ:

ಸಂಗೀತ: ಚರಣ್ ರಾಜ್

ಛಾಯಾಗ್ರಹಣ (DOP): ಅದ್ವೈತ್ ಗುರುಮೂರ್ತಿ

ಕಲಾ ನಿರ್ದೇಶನ: ವಿಶ್ವಾಸ್ ಕಶ್ಯಪ್

ಕಾಸ್ಟ್ಯೂಮ್ ಡಿಸೈನ್: ಇಂಚರಾ ಸುರೇಶ್ ಎಲ್ಲಾ ಅಂದುಕೊಂಡಂತೆ ನಡೆದರೆ, ಈ ವರ್ಷದ ಕೊನೆಯಲ್ಲಿ (2026ರ ಅಂತ್ಯಕ್ಕೆ) ಈ ಬಿಗ್ ಬಜೆಟ್ ಆಕ್ಷನ್ ಸ್ಪೈ ಥ್ರಿಲ್ಲರ್ ಸಿನಿಮಾ ಬೆಳ್ಳಿಪರದೆಗೆ ಅಪ್ಪಳಿಸುವುದು ಗ್ಯಾರಂಟಿ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia