ಲಕ್ನೋ: ಸೋಶಿಯಲ್ ಮೀಡಿಯಾದ ಶಕ್ತಿ ಎಷ್ಟಿದೆ ಎಂಬುದಕ್ಕೆ ಉತ್ತರ ಪ್ರದೇಶದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ರಸ್ತೆ ಸರಿಪಡಿಸುವಂತೆ ಆರು ವರ್ಷದ ಪುಟ್ಟ ಬಾಲಕಿ ಮಾಡಿಕೊಂಡ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ, ಕೇವಲ ಕೆಲವೇ ದಿನಗಳಲ್ಲಿ ಹಾಳಾಗಿದ್ದ ರಸ್ತೆಯನ್ನು ದುರಸ್ತಿ ಮಾಡುವ ಮೂಲಕ ಗಮನ ಸೆಳೆದಿದೆ.
ಉತ್ತರ ಪ್ರದೇಶದ ಸಲೆಂಪುರ್ ಕೋನ್ ಪ್ರದೇಶದ ಒಂದನೇ ತರಗತಿ ವಿದ್ಯಾರ್ಥಿನಿ ಮಾನವಿ ಸಿಂಗ್ ಎಂಬ ಬಾಲಕಿ ತನ್ನ ಮನೆಯ ಸಮೀಪವಿರುವ ರಸ್ತೆಯ ದುಸ್ಥಿತಿಯ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಮಳೆಯಿಂದಾಗಿ ರಸ್ತೆಯಲ್ಲೆಲ್ಲಾ ನೀರು ನಿಂತು, ಓಡಾಡಲು ಹರಸಾಹಸ ಪಡಬೇಕಾದ ಸ್ಥಿತಿಯನ್ನು ವಿಡಿಯೋದಲ್ಲಿ ತೋರಿಸಿದ್ದಳು. ನೇರವಾಗಿ ಜಿಲ್ಲಾಧಿಕಾರಿ (DM) ಅಂಜನಿ ಕುಮಾರ್ ಸಿಂಗ್ ಅವರನ್ನು ಉದ್ದೇಶಿಸಿ ಮಾತನಾಡಿದ್ದ ಮಾನವಿ, “ಡಿಎಂ ಅಂಕಲ್, ನೀವು ತುಂಬಾ ಒಳ್ಳೆಯವರು. ದಯವಿಟ್ಟು ನಮ್ಮ ಮನೆಯ ರಸ್ತೆಯನ್ನು ಸರಿಪಡಿಸಿಕೊಡಿ” ಎಂದು ಮುದ್ದಾಗಿ ವಿನಂತಿಸಿದ್ದಳು.
ಈ ವಿಡಿಯೋ ಕಾಳ್ಗಿಚ್ಚಿನಂತೆ ಹರಡಿ ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ, ಜಿಲ್ಲಾಧಿಕಾರಿ ಅಂಜನಿ ಕುಮಾರ್ ಸಿಂಗ್ ಅವರು ಅಧಿಕಾರಿಗಳ ತಂಡದೊಂದಿಗೆ ಖುದ್ದಾಗಿ ಹಳ್ಳಿಗೆ ಭೇಟಿ ನೀಡಿದರು. ಸ್ಥಳ ಪರಿಶೀಲನೆ ನಡೆಸಿದಾಗ ರಸ್ತೆಯು ತಗ್ಗು ಬಿದ್ದಿದ್ದು, ಚರಂಡಿ ನೀರು ಹಾಗೂ ಮಳೆನೀರು ನಿಂತು ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ದೃಢಪಟ್ಟಿತು.
ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ರಸ್ತೆಯನ್ನು ತುರ್ತಾಗಿ ದುರಸ್ತಿ ಮಾಡುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಆದೇಶ ನೀಡಿದರು. ಅಷ್ಟೇ ಅಲ್ಲದೆ, ಪುಟ್ಟ ಬಾಲಕಿ ಮಾನವಿ ಮತ್ತು ಆಕೆಯ ಕುಟುಂಬದವರನ್ನು ಭೇಟಿ ಮಾಡಿ, ಸಮಾಜದ ಬಗ್ಗೆ ಆಕೆಗಿರುವ ಕಾಳಜಿಯನ್ನು ಶ್ಲಾಘಿಸಿದರು. ಇದರೊಂದಿಗೆ, ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಉದ್ಭವಿಸದಂತೆ ಚರಂಡಿ ವ್ಯವಸ್ಥೆಯನ್ನು ಸರಿಯಾಗಿ ನಿರ್ಮಿಸುವ ಬಗ್ಗೆಯೂ ಅವರು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳ ಈ ಮಿಂಚಿನ ವೇಗದ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಪುಟ್ಟ ಬಾಲಕಿಯ ಧೈರ್ಯದ ಬಗ್ಗೆ ಮೆಚ್ಚುಗೆಯ ಸುರಿಮಳೆಯೇ ಹರಿಯುತ್ತಿದೆ.

