ಕನ್ನಡದ ಬಹುನಿರೀಕ್ಷಿತ ಸಿನಿಮಾ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಾಗಿ ಮೊದಲ ದಿನವೇ 150 ಕೋಟಿ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು, ಇದೀಗ ಮತ್ತೊಂದು ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂದಿದೆ.
ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ 'ಟಾಕ್ಸಿಕ್' ಸಿನಿಮಾ ವೀಕ್ಷಿಸುತ್ತಿರುವುದಾಗಿ ಬರೆದುಕೊಂಡಿರುವ ಪೋಸ್ಟ್‌ವೊಂದು ಎಕ್ಸ್‌ನಲ್ಲಿ ವೈರಲ್ ಆಗಿದೆ.
ಟಾಕ್ಸಿಕ್ ನೋಡುತ್ತಿದ್ದೇನೆ ಎಂದು ಫಿಂಗರ್ ಕ್ರಾಸ್ ಇಮೋಜಿಯನ್ನು ಬಳಸಿ ಪೋಸ್ಟ್ ಮಾಡಲಾಗಿದೆ.
ಇನ್ನು ಟಾಕ್ಸಿಕ್ ಎ ಸರ್ಟಿಫಿಕೇಟ್ ಚಿತ್ರವಾಗಿದ್ದು, ವೈಭವ್ ಸೂರ್ಯವಂಶಿ ಕೇವಲ 15 ವರ್ಷದ ಕ್ರಿಕೆಟಿಗನಾಗಿರುವ ಕಾರಣ ಸದ್ಯ ಇದು ಚರ್ಚೆಯನ್ನು ಹುಟ್ಟುಹಾಕಿದೆ. ಇದೇ ಕಾರಣಕ್ಕೆ ಕೆಲವರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರು ಹೇಗೆ 'ಟಾಕ್ಸಿಕ್' ಸಿನಿಮಾವನ್ನು ವೀಕ್ಷಿಸಲು ಸಾಧ್ಯ, ಚಿಕ್ಕ ವಯಸ್ಸಿನವರನ್ನು ಚಿತ್ರ ವೀಕ್ಷಿಸಲು ಹೇಗೆ ಬಿಟ್ಟರು ಎಂದು ಪ್ರಶ್ನೆಗಳನ್ನು ಎತ್ತಿದ್ದಾರೆ.
ಆದರೆ ಈ ಸಂಪೂರ್ಣ ಬೆಳವಣಿಗೆಯಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ವೈರಲ್ ಆಗಿರುವ ಎಕ್ಸ್ ಖಾತೆ ವೈಭವ್ ಸೂರ್ಯವಂಶಿಯ ಅಧಿಕೃತ ಖಾತೆ ಅಲ್ಲ ಎಂಬುದು. ಹೌದು, ಹಲವು ದಿನಗಳಿಂದ ಈ ಖಾತೆಯನ್ನು ವೈಭವ್ ಸೂರ್ಯವಂಶಿಯವರದ್ದೇ ಎಂದು ನೆಟ್ಟಿಗರು ನಂಬಿ ಅದರಲ್ಲಿ ಬರುವ ಟ್ವೀಟ್‌ಗಳನ್ನು ರಿಶೇರ್ ಮಾಡಿದ್ದು, ಬದಲಾಗಿ ಇದೊಂದು ಫ್ಯಾನ್‌ಪೇಜ್ ಆಗಿದೆ. ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇರುವ ಕಾರಣಕ್ಕೆ ಜನರು ಇದನ್ನು ಅಧಿಕೃತ ಖಾತೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.
ಹೀಗೆ ಚರ್ಚೆ ಹುಟ್ಟಿಕೊಂಡ ಬೆನ್ನಲ್ಲೇ ಈ ಹಿಂದೆ ಇದೇ ವೈಭವ್ ಸೂರ್ಯವಂಶಿ ಧುರಂಧರ್ 2 ತನ್ನ ಫೇವರಿಟ್ ಚಿತ್ರವೆಂದು ಹೇಳಿದ್ದ ಹೇಳಿಕೆ ಸಹ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಅದೂ ಸಹ ಎ ಸರ್ಪಿಫೈಡ್ ಚಿತ್ರವಾಗಿತ್ತು.

