ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬ್ಯಾಕೋಡು ಸಮೀಪದ ಗೊರಗೋಡು ಗ್ರಾಮದಲ್ಲಿ ಮಂಗಳವಾರ ವ್ಯಕ್ತಿಯೊಬ್ಬ ತಂದೆಯನ್ನೇ ಕೊಲೆ ಮಾಡಿದ್ದಾನೆ. ಕೊಲೆಗೈದ ನಂತರ ಮೃತದೇಹವನ್ನು ಚಿಕ್ಕಪ್ಪನ ಜಮೀನಿನ ಬಾವಿಗೆ ಎಸೆದಿದ್ದಾನೆ.
ಸುಬ್ರಾಯ(55) ಮೃತಪಟ್ಟವರು. ಮಗ ಜಯಂತ್ ಕೊಲೆ ಆರೋಪಿಯಾಗಿದ್ದಾನೆ.
ತಂದೆ ಸುಬ್ರಾಯ ಅವರೊಂದಿಗೆ ಜಗಳವಾಡಿದ ಜಯಂತ್ ಕೈ ಮತ್ತು ಕೋಲಿನಿಂದ ಹೊಡೆದು ಕೊಲೆ ಮಾಡಿ ಚಿಕ್ಕಪ್ಪನ ಗದ್ದೆಯಲ್ಲಿದ್ದ ಬಾವಿಗೆ ಮೃತದೇಹ ತಳ್ಳಿದ್ದಾನೆ.
ಮೃತ ಸುಬ್ರಾಯ 2010ರಲ್ಲಿ ತನ್ನ ತಂದೆ ಮತ್ತು ತಂಗಿಯನ್ನು ಕೊಲೆ ಮಾಡಿ 14 ವರ್ಷ ಜೈಲಿನಲ್ಲಿದ್ದು 2023ರಲ್ಲಿ ಬಿಡುಗಡೆಯಾಗಿದ್ದ. ಜೈಲಿನಿಂದ ಬಂದು ಒಂದು ತಿಂಗಳಲ್ಲೇ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದ. ಈ ಕುರಿತು ಮಗ ಜಯಂತ್ ನೀಡಿದ ಕೊಲೆ ಯತ್ನ ದೂರಿನ ಮೇರೆಗೆ ಸುಬ್ರಾಯ ಮತ್ತೆ ಜೈಲಿಗೆ ಹೋಗಿದ್ದು, ಕಳೆದ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ.
ನಂತರ ಊರಿಗೆ ಬಾರದೇ ಬೇರೆ ಊರಿನಲ್ಲಿ ನೆಲೆಸಿದ್ದ. ಐದು ದಿನಗಳ ಹಿಂದೆ ಊರಿಗೆ ಬಂದಿದ್ದ ಎನ್ನಲಾಗಿದೆ. ತಂದೆ ಮಗನ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರಕರಣ ದಾಖಲಿಸಿಕೊಂಡ ಕಾರ್ಗಲ್ ಠಾಣೆ ಪೋಲೀಸರು ಆರೋಪಿ ಜಯಂತ್ ನನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

