ರಕ್ಷಾ ಬಂಧನ ಹಬ್ಬದ ಅಂಗವಾಗಿ ಖ್ಯಾತ ನಟಿ ಕೃತಿ ಸನೋನ್ ಅಭಿನಯಿಸಿದ್ದ ಜ್ಯುವೆಲ್ಲರಿ ಜಾಹೀರಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಜಾಹೀರಾತಿನಲ್ಲಿ ಕೃತಿ ಧರಿಸಿದ್ದ ಆಧುನಿಕ ಶೈಲಿಯ ಉಡುಪಿನ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಜಿವಾ ಸಂಸ್ಥೆಯು ಆ ವಿಡಿಯೋವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಿಂದ ತೆಗೆದುಹಾಕಿತ್ತು.
ಆದರೆ, ಜಾಹೀರಾತು ಹಿಂಪಡೆದ ತಕ್ಷಣವೇ ಟ್ರೋಲ್ ಮಾಡುವವರ ಎದುರು ನಟಿಯನ್ನು ಸಂಸ್ಥೆ ಏಕಾಂಗಿಯಾಗಿ ಬಿಟ್ಟಿದೆ ಎಂಬ ಮತ್ತೊಂದು ಟೀಕೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿತ್ತು.
ಈ ವಿಚಾರವಾಗಿ ಸಂಸ್ಥೆಯ ಸಂಸ್ಥಾಪಕರು ಸ್ಪಷ್ಟನೆ ನೀಡಿದ್ದು, ಕೃತಿ ಸನೋನ್ ಅವರೊಂದಿಗೆ ತಂಗಾಗಿ ನಿಲ್ಲುವುದಾಗಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಜಾಹೀರಾತು ವಿರುದ್ಧ ಆಕ್ರೋಶ ಹೆಚ್ಚಾದಂತೆ ಕೆಲವು ಮಳಿಗೆಗಳ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಮಳಿಗೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಭದ್ರತೆ ಮತ್ತು ಸುರಕ್ಷತೆ ನಮಗೆ ಅತ್ಯಂತ ಮುಖ್ಯವಾಗಿತ್ತು. ಯಾವುದೇ ಕಾರಣಕ್ಕೂ ನೌಕರರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ತಕ್ಷಣವೇ ಆ ವಿಡಿಯೋವನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ.
ಈ ವಿಡಿಯೋ ಹಿಂಪಡೆದಿರುವುದು ಸಿಬ್ಬಂದಿಯ ರಕ್ಷಣೆಯ ಹಿತದೃಷ್ಟಿಯಿಂದಲೇ ಹೊರತು ನಟಿ ಕೃತಿ ಸನೋನ್ ಅವರಿಗೆ ಬೆಂಬಲ ಹಿಂಪಡೆಯಲು ಅಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಈ ಜಾಹೀರಾತಿನ ಪರಿಕಲ್ಪನೆಯನ್ನು ಕೃತಿ ಅವರೊಂದಿಗೆ ಚರ್ಚಿಸಿಯೇ ರೂಪಿಸಲಾಗಿತ್ತು ಮತ್ತು ಹಬ್ಬದ ನಿಜವಾದ ಸಂಭ್ರಮವನ್ನು ಸಾರುವ ಉದ್ದೇಶ ನಮ್ಮದಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಮತ್ತೊಂದೆಡೆ, ಉಡುಪಿನ ಕುರಿತು ಎದ್ದಿದ್ದ ವಿವಾದಕ್ಕೆ ಈಗಾಗಲೇ ಪ್ರತಿಕ್ರಿಯಿಸಿದ್ದ ನಟಿ ಕೃತಿ ಸನೋನ್, ಭಾರತೀಯ ಉಡುಪುಗಳ ಶೈಲಿ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಮಹಿಳೆಯರು ಏನು ಧರಿಸಬೇಕು ಮತ್ತು ಏನು ಧರಿಸಬಾರದು ಎಂದು ಸೂಚಿಸುವುದನ್ನು ಬಿಟ್ಟು ಅವರ ವೈಯಕ್ತಿಕ ಆಯ್ಕೆಗೆ ಗೌರವ ನೀಡಬೇಕು ಎಂದು ಪ್ರತಿಪಾದಿಸಿದ್ದರು.
“>

