ಬಳ್ಳಾರಿ: ಉಗ್ರರ ಜೊತೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ಬಳ್ಳಾರಿಯ ಕೌಲ್ ಬಜಾರ್ ನಿವಾಸಿ ಅಬ್ದುಲ್ ಸಲಾಮ್ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆನ್‌ಲೈನ್ ಮೂಲಕ ಧರ್ಮ ಪ್ರಚೋದನೆ ಹಾಗೂ ಮೂಲಭೂತವಾದವನ್ನು ಹರಡಿ, ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯಲ್ಲಿ ರೆಹಮತುಲ್ಲ ಷರಿಫ್ ಎಂಬಾತನ ವಿರುದ್ಧ ಕೇಸ್ ದಾಖಲಾಗಿತ್ತು.
ತನಿಖೆಯ ವೇಳೆ ರೆಹಮತುಲ್ಲ ಷರಿಫ್ ಜೊತೆಗೆ ಬಳ್ಳಾರಿಯ ಅಬ್ದುಲ್ ಸಲಾಮ್ ನಿಕಟ ನಂಟು ಹೊಂದಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 26ರಂದೇ ಎನ್‌ಐಎ ಅಧಿಕಾರಿಗಳು ಅಬ್ದುಲ್ ಸಲಾಮ್‌ನನ್ನು ಬಂಧಿಸಿದ್ದರು.
ಬಂಧಿತ ಅಬ್ದುಲ್ ಸಲಾಮ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದರೂ, ಪ್ರಕರಣದ ತನಿಖೆಗಾಗಿ ಎನ್‌ಐಎ ತಂಡವು ಇಂದು ಮತ್ತೆ ಬಳ್ಳಾರಿಯ ಕೌಲ್ ಬಜಾರ್‌ನಲ್ಲಿರುವ ಆತನ ನಿವಾಸಕ್ಕೆ ಭೇಟಿ ನೀಡಿದೆ. ಪರಿಶೀಲನೆ ವೇಳೆ ಮೊಬೈಲ್ ಫೋನ್ ವಶಕ್ಕೆ ಪಡೆದಿದೆ.
ಉಗ್ರ ಸಂಘಟನೆಗಳೊಂದಿಗಿನ ಚಾಟಿಂಗ್, ಆನ್‌ಲೈನ್ ಲಿಂಕ್‌ಗಳು ಹಾಗೂ ಆರ್ಥಿಕ ವಹಿವಾಟುಗಳ ಡಿಜಿಟಲ್ ಪುರಾವೆಗಳನ್ನು ಕಲೆಹಾಕಲು ಮನೆಯಲ್ಲಿದ್ದ ಪ್ರಮುಖ ಮೊಬೈಲ್ ಫೋನ್ ಅನ್ನು ಅಧಿಕಾರಿಗಳು ವಶ ಪಡಿಸಿದ್ದಾರೆ. ಶೋಧ ಕಾರ್ಯ ಮುಗಿದ ಬಳಿಕ ಎನ್‌ಐಎ ತಂಡವು ವಾಪಸ್ ತೆರಳಿದೆ.

