Dailyhunt Logo
  • Light mode
    Follow system
    Dark mode
    • Play Story
    • App Story
ʼವಿಐಪಿʼ ಸಂಸ್ಕೃತಿಗೆ ಬಡವನೇ ಬಲಿಪಶುವಾ ? ಸಾಮಾನ್ಯನ ಸೈಕಲ್ ರಸ್ತೆಗೆಸೆದ ಪೊಲೀಸ್‌ | Watch

ʼವಿಐಪಿʼ ಸಂಸ್ಕೃತಿಗೆ ಬಡವನೇ ಬಲಿಪಶುವಾ ? ಸಾಮಾನ್ಯನ ಸೈಕಲ್ ರಸ್ತೆಗೆಸೆದ ಪೊಲೀಸ್‌ | Watch

ದೇಶದ ಬಹುತೇಕ ರಸ್ತೆಗಳಲ್ಲಿ ಜನಸಾಮಾನ್ಯರಿಗೆ ನಿತ್ಯ ಕಂಟಕವಾಗಿ ಪರಿಣಮಿಸಿರುವ 'ವಿಐಪಿ ಸಂಸ್ಕೃತಿ' ಹಾಗೂ ಪೊಲೀಸರ ದರ್ಪಕ್ಕೆ ಸಾಕ್ಷಿಯಾಗುವ ಮತ್ತೊಂದು ಆಘಾತಕಾರಿ ವಿಡಿಯೋ ಬೆಳಕಿಗೆ ಬಂದಿದೆ. ವಿಐಪಿ ವಾಹನವೊಂದಕ್ಕೆ ಸುಗಮವಾಗಿ ದಾರಿ ಮಾಡಿಕೊಡುವ ಭರದಲ್ಲಿ, ಕರ್ತವ್ಯನಿರತ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಬಡ ಸೈಕಲ್ ಸವಾರನ ಮೇಲೆ ಹಲ್ಲೆ ನಡೆಸಿ, ಆತನ ಸೈಕಲ್ ಅನ್ನು ರಸ್ತೆಗೆ ಎಸೆದು ದರ್ಪ ಮೆರೆದಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಈ ಇಡೀ ದೃಶ್ಯಾವಳಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಆಕ್ರೋಶದ ಕಟ್ಟೆಯೊಡೆದಿದೆ.

ವಿಡಿಯೋದಲ್ಲಿ ಏನಿದೆ? ವೈರಲ್ ಆದ ವಿಡಿಯೋ ಕ್ಲಿಪ್‌ನಲ್ಲಿ, ಭಾರವಾದ ಸರಕುಗಳನ್ನು ಹೊತ್ತು ಸಾಗುತ್ತಿದ್ದ ಸೈಕಲ್ ಸವಾರನೊಬ್ಬ ರಸ್ತೆಯಲ್ಲಿ ನಿಧಾನವಾಗಿ ಚಲಿಸುತ್ತಿರುವುದು ಕಾಣಿಸುತ್ತದೆ. ಈ ವೇಳೆ, ಹಿಂಬದಿಯಿಂದ ಬರುತ್ತಿದ್ದ ವಿಐಪಿ ಕಾರಿಗೆ ದಾರಿ ಮಾಡಿಕೊಡಲು ಧಾವಿಸಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ, ಸೈಕಲ್ ಸವಾರನನ್ನು ಹಿಡಿದು ಬಲವಂತವಾಗಿ ರಸ್ತೆಯ ಬದಿಗೆ ದೂಡಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಸಾಮಾನು ಸರಂಜಾಮುಗಳಿದ್ದ ಸೈಕಲ್ ಅನ್ನು ನಿರ್ದಯವಾಗಿ ರಸ್ತೆಯ ಮೇಲೆಯೇ ಬಿಸಾಕಿದ್ದಾನೆ. ವಿಐಪಿ ಕಾರು ಯಾವುದೇ ಅಡೆತಡೆಯಿಲ್ಲದೆ ಸಾಗಲೆಂದು ಆತ ಸವಾರನೊಂದಿಗೆ ದುರ್ವರ್ತನೆ ತೋರಿರುವುದು ಸ್ಪಷ್ಟವಾಗಿ ದಾಖಲಾಗಿದೆ.

ಖಾಸಗಿ ಕಾರು ನಂಬರ್ ಪತ್ತೆ ಹಚ್ಚಲು ನೆಟ್ಟಿಗರ ಕರೆ: ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಕೆಲವೇ ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಲ್ಲದೆ, "ಪುಣೆಯ ನಾಗರಿಕರೇ, ದಯವಿಟ್ಟು ಈ MH12YJ3333 ನಂಬರ್‌ನ ಕಾರಿನ ಮಾಲೀಕ ಯಾರೆಂದು ಪತ್ತೆ ಹಚ್ಚಿ" ಎಂದು ಪೋಸ್ಟ್‌ನಲ್ಲಿ ಕೋರಲಾಗಿದೆ.

ವಿಐಪಿ ಹೆಸರಿನಲ್ಲಿ ಸಾಮಾನ್ಯ ಜನರ ಮೇಲೆ ದೌರ್ಜನ್ಯ ಎಸಗುತ್ತಿರುವ ಪೊಲೀಸರ ವರ್ತನೆಗೆ ಸಾರ್ವಜನಿಕರು ತೀವ್ರ ಕಿಡಿಕಾರಿದ್ದಾರೆ.

ನೆಟ್ಟಿಗರ ಆಕ್ರೋಶದ ಮಾತುಗಳು: ಈ ಅಮಾನವೀಯ ಘಟನೆಯನ್ನು ಖಂಡಿಸಿ ಪುಣೆ ಪೊಲೀಸ್ ಆಯುಕ್ತರು, ಮುಂಬೈ ಪೊಲೀಸ್ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ.

ಸಾಮಾನ್ಯ ನಾಗರಿಕರ ಹಕ್ಕುಗಳನ್ನು ತುಳಿದು ವಿಐಪಿಗಳಿಗೆ ರತ್ನಗಂಬಳಿ ಹಾಸುವ ಈ ಅಸಹ್ಯಕರ ಸಂಸ್ಕೃತಿಗೆ ಯಾವಾಗ ಕಡಿವಾಣ ಬೀಳುತ್ತದೆ ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ಈ ಘಟನೆ ಮುನ್ನೆಲೆಗೆ ತಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia