ಬೆಂಗಳೂರು: ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂಬುದು ಹಲವು ವಿದ್ಯಾರ್ಥಿಗಳ ಕನಸು. ಆದರೆ ಯಾವ ದೇಶಕ್ಕೆ ಹೋಗಬೇಕು, ಯಾವ ವಿಶ್ವವಿದ್ಯಾಲಯ ಆಯ್ಕೆ ಮಾಡಬೇಕು, ಸ್ಕಾಲರ್‌ಶಿಪ್ ಸಿಗುತ್ತದೆಯೇ, ವೀಸಾ ಪ್ರಕ್ರಿಯೆ ಹೇಗೆ ಎಂಬ ಹಲವು ಪ್ರಶ್ನೆಗಳು ವಿದ್ಯಾರ್ಥಿಗಳನ್ನು ಕಾಡುತ್ತವೆ.
ಇಂತಹ ವಿದ್ಯಾರ್ಥಿಗಳಿಗೆ ನೆರವಾಗಲು ಕರ್ನಾಟಕ ಸರ್ಕಾರ ವಿಶೇಷ ಶೈಕ್ಷಣಿಕ ಮೇಳ ಆಯೋಜಿಸಿದೆ.
ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮದ ಸಹಯೋಗದಲ್ಲಿ 'ವಿದೇಶದಲ್ಲಿ ಅಧ್ಯಯನ-2026' ಕಾರ್ಯಕ್ರಮ ನಡೆಯಲಿದೆ. ಸೆಪ್ಟೆಂಬರ್ 6ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನ ಗಾಯತ್ರಿ ಗ್ರ್ಯಾಂಡ್‌ನಲ್ಲಿ ಈ ಮೇಳ ನಡೆಯಲಿದೆ.
75ಕ್ಕೂ ಹೆಚ್ಚು ವಿದೇಶಿ ವಿಶ್ವವಿದ್ಯಾಲಯಗಳು
ಈ ಶೈಕ್ಷಣಿಕ ಮೇಳದಲ್ಲಿ 10ಕ್ಕೂ ಹೆಚ್ಚು ದೇಶಗಳ 75ಕ್ಕೂ ಅಧಿಕ ವಿಶ್ವವಿದ್ಯಾಲಯಗಳು ಭಾಗವಹಿಸುವ ನಿರೀಕ್ಷೆಯಿದೆ. ಯುಕೆ, ಆಸ್ಟ್ರೇಲಿಯಾ, ಅಮೆರಿಕ, ಐರ್ಲೆಂಡ್, ಜರ್ಮನಿ, ಸಿಂಗಾಪುರ, ಯುಎಇ, ನ್ಯೂಜಿಲ್ಯಾಂಡ್ ಸೇರಿದಂತೆ ಹಲವು ದೇಶಗಳ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಕೋರ್ಸ್ ಮತ್ತು ವಿಶ್ವವಿದ್ಯಾಲಯಗಳ ಆಯ್ಕೆ ಬಗ್ಗೆ ಮಾಹಿತಿ ಸಿಗಲಿದೆ.
ಸ್ಕಾಲರ್‌ಶಿಪ್, ವೀಸಾ ಬಗ್ಗೆ ಮಾಹಿತಿ
ವಿದ್ಯಾರ್ಥಿಗಳಿಗೆ ವಿದೇಶಿ ಶಿಕ್ಷಣಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ಕೋರ್ಸ್ ಆಯ್ಕೆ, ವಿಶ್ವವಿದ್ಯಾಲಯದ ಆಯ್ಕೆ, ಪ್ರವೇಶ ಪ್ರಕ್ರಿಯೆ, ವಿದ್ಯಾರ್ಥಿ ವೀಸಾ, ಸ್ಕಾಲರ್‌ಶಿಪ್, ಶಿಕ್ಷಣ ಸಾಲ ಹಾಗೂ ಭಾಷಾ ನೈಪುಣ್ಯತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಪಡೆಯಬಹುದು.
ವಿದೇಶಿ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳನ್ನೇ ನೇರವಾಗಿ ಭೇಟಿ ಮಾಡಿ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ.
ಯಾವಾಗ, ಎಲ್ಲಿ ನಡೆಯಲಿದೆ?
ದಿನಾಂಕ: ಸೆಪ್ಟೆಂಬರ್ 6, 2026
ಸ್ಥಳ: ಗಾಯತ್ರಿ ಗ್ರ್ಯಾಂಡ್, ಗೇಟ್ ನಂ.4, ಗಾಯತ್ರಿ ವಿಹಾರ್, ಅರಮನೆ ಮೈದಾನ, ಬೆಂಗಳೂರು
ಸಮಯ: ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ
ಪ್ರವೇಶ: ಉಚಿತ
ಆಸಕ್ತ ವಿದ್ಯಾರ್ಥಿಗಳು ಅಧಿಕೃತ Study Abroad ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಕಾರ್ಯಕ್ರಮದ ದಿನ ಸ್ಥಳದಲ್ಲಿಯೂ ನೋಂದಣಿಗೆ ಅವಕಾಶವಿದೆ ಎಂದು ತಿಳಿಸಲಾಗಿದೆ.
ವಿದೇಶದಲ್ಲಿ ಓದಲು ಯೋಜನೆ ಹಾಕಿಕೊಂಡಿರುವ ವಿದ್ಯಾರ್ಥಿಗಳಿಗೆ ಒಂದೇ ಸ್ಥಳದಲ್ಲಿ ಹಲವು ವಿಶ್ವವಿದ್ಯಾಲಯಗಳ ಬಗ್ಗೆ ಮಾಹಿತಿ ಪಡೆಯಲು ಈ ಮೇಳ ನೆರವಾಗಲಿದೆ. ಅದರಲ್ಲೂ ಕೋರ್ಸ್, ಶುಲ್ಕ, ಸ್ಕಾಲರ್‌ಶಿಪ್, ಪ್ರವೇಶ ಮತ್ತು ವೀಸಾ ಪ್ರಕ್ರಿಯೆ ಬಗ್ಗೆ ನೇರವಾಗಿ ಮಾಹಿತಿ ಪಡೆಯಲು ಇದು ಉತ್ತಮ ವೇದಿಕೆಯಾಗಿದೆ.

