ಬೆಂಗಳೂರು: ವಿವಾಹಿತ ಪ್ರೇಯಸಿ ಭೇಟಿಯಾಗಲು ಆಕೆಯ ಪತಿ ಮನೆ ಬಳಿ ಹೋಗಿದ್ದ ಯುವಕನ ಕೊಲೆ ಮಾಡಲಾಗಿದೆ. ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಮಣ್ಣ ಗಾರ್ಡನ್ ನಲ್ಲಿ ಘಟನೆ ನಡೆದಿದೆ.
ರಾಮನಗರದ ಬೀಡಿ ಕಾಲೋನಿ ನಿವಾಸಿ ಮೊಹಮದ್ ಖಾಸಿಂ(27) ಕೊಲೆಯಾದ ಯುವಕ.
ವಿವಾಹಿತ ಪ್ರೇಯಸಿಯ ಪತಿ ಮನೆಯವರು ಕೊಲೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಾಮನಗರದಲ್ಲಿ ಗುಜರಿ, ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಮೊಹಮದ್ ಖಾಸಿಂ ಆರೇಳು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಮೂರು ವರ್ಷದ ಹಿಂದೆ ಬೇರೆ ಯುವಕನೊಂದಿಗೆ ಆಕೆಯ ಮದುವೆಯಾಗಿದ್ದು, ದಂಪತಿ ಶಾಮಣ್ಣ ಗಾರ್ಡನ್ ನಲ್ಲಿ ವಾಸವಾಗಿದ್ದಾರೆ. ಪತಿಯ ಕುಟುಂಬದವರು ಬೇರೆ ಕಡೆ ವಾಸವಾಗಿದ್ದಾರೆ.
ಖಾಸಿಂ ಮತ್ತು ಯುವತಿ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು. ಆಗಾಗ ಖಾಸಿಂ ಯುವತಿಯ ಮನೆಗೆ ಬಂದು ಹೋಗುತ್ತಿದ್ದ. ಈ ವಿಷಯ ತಿಳಿದ ಆಕೆಯ ಪತಿ ಮತ್ತು ಕುಟುಂಬ ಸದಸ್ಯರು ಬೈದಾಡಿದ್ದರು ಎನ್ನಲಾಗಿದೆ.
ಮೇ 25 ರಂದು ಸಂಜೆ ಮೊಹಮ್ಮದ್ ಖಾಸಿಂ ಯುವತಿಯ ಮನೆ ಬಳಿ ಬಂದಾಗ ಪತಿ ಮನೆಯವರು ಹಲ್ಲೆ ಮಾಡಿದ್ದಾರೆ. ಸಾರ್ವಜನಿಕರು ಜಗಳ ಬಿಡಿಸಿ ಸ್ಥಳದಿಂದ ಆತನನ್ನು ಕಳುಹಿಸಿದ್ದಾರೆ. ತೀವ್ರ ಹಲ್ಲೆಗೊಳಗಾಗಿದ್ದ ಖಾಸಿಂ ರಾಮನಗರಕ್ಕೆ ಮರಳಿದ್ದು, ಮೇ 26ರಂದು ತೀವ್ರ ಅಸ್ವಸ್ಥನಾಗಿದ್ದ. ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೇ 27ರಂದು ಮೃತಪಟ್ಟಿದ್ದಾನೆ. ಯುವತಿಯ ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಖಾಸಿಂ ಪೋಷಕರು ದೂರು ನೀಡಿದ್ದು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

