ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪತ್ನಿ, ಪುತ್ರನೊಂದಿಗೆ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಗಾವತಿಯ ಪ್ರಶಾಂತನಗರದ ನಿವಾಸಿಗಳಾಗಿರುವ ಗಂಗಾವತಿಯ ಪ್ರತಿಷ್ಠಿತ ರಾಯ್ಕರ್ ಕುಟುಂಬದ ಮೂವರು ಮೂವರು ಸಾಲಭಾದೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಕಾಶ್ ರಾಯ್ಕರ್(54), ಅವರ ಪತ್ನಿ ಪ್ರಭಾ(45) ಮತ್ತು ಪುತ್ರ ಶಶಾಂಕ್(19) ತಮ್ಮ ಹಳೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಗಾವತಿಯಲ್ಲಿ ಹಲವು ವರ್ಷಗಳಿಂದ ಜುವೆಲ್ಲರಿ ಶಾಪ್ ಹೊಂದಿರುವ ಪ್ರಕಾಶ್ ರಾಯ್ಕರ್ ಚಿನ್ನಾಭರಣ ವ್ಯಾಪಾರ, ಲೇವಾದೇವಿ ವ್ಯವಹಾರ ಮಾಡಿಕೊಂಡಿದ್ದರು. ಚಿನ್ನಾಭರಣ ವ್ಯಾಪಾರದಲ್ಲಿ ಇತ್ತೀಚೆಗೆ ನಷ್ಟವಾಗಿತ್ತು. ಹೀಗಾಗಿ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದ್ದರು.
ಇದಕ್ಕಾಗಿ ಖಾಸಗಿ ವ್ಯಕ್ತಿಗಳು, ಖಾಸಗಿ ಸಂಸ್ಥೆಗಳಿಂದ ಸಾಲ ಪಡೆದುಕೊಂಡಿದ್ದರು. ಆದರೆ ಸಾಲಗಾರರ ಕಾಟ ಹೆಚ್ಚಾಗಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ನಷ್ಟದಿಂದ ತೀವ್ರ ನಷ್ಟಕ್ಕೀಡಾಗಿದ್ದ ಅವರು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಎಸ್ಪಿ ರಾಮ್ ಎಲ್. ಅರಸಿದ್ದಿ, ಡಿವೈಎಸ್ಪಿ ಜಿ.ಎನ್. ನ್ಯಾಮಗೌಡ, ಪಿಐ ಪ್ರಕಾಶ್ ಯಾತನೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

