ವಿದ್ಯಾರ್ಥಿಗಳ ಪ್ರತಿಭಟನೆಗೆ ಸರ್ಕಾರದ ಪ್ರತಿಕ್ರಿಯೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 15 ವರ್ಷದ ಬಾಲಕಿಯೊಬ್ಬಳ ಕ್ಷಮೆಯಾಚನೆಯ ವೀಡಿಯೊವನ್ನು ಬಲವಂತವಾಗಿ ಮಾಡಿಸಲಾಗಿದೆ ಎಂದು ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿರುವ ರಾಹುಲ್ ಗಾಂಧಿ, ವಿದ್ಯಾರ್ಥಿಗಳನ್ನು ಮೊದಲು ಬೆದರಿಸಿ, ಅವರ ಮನೆಗಳಿಗೆ ಗೂಂಡಾಗಳನ್ನು ಕಳುಹಿಸಿ, ಬಲವಂತವಾಗಿ ಕ್ಷಮೆ ಯಾಚಿಸುವಂತೆ ಮಾಡಿ ನಂತರ ಅದನ್ನು ಸ್ವೀಕರಿಸುವುದು ಸಂಪೂರ್ಣ ಅಸಂಬದ್ಧ ಎಂದು ಕಿಡಿಕಾರಿದ್ದಾರೆ.
ನಾವು ಇದನ್ನು ಒಪ್ಪುವುದಿಲ್ಲ, ನಮಗೆ ಸರಿಯಾಗಿ ಕಾರ್ಯನಿರ್ವಹಿಸುವ ಶಿಕ್ಷಣ ವ್ಯವಸ್ಥೆ ಬೇಕು, ಪರೀಕ್ಷೆ ಸೋರಿಕೆಗಳು ನಿಲ್ಲಬೇಕು ಮತ್ತು ಈ ದೇಶದ ಭವಿಷ್ಯಕ್ಕೆ ಗೌರವ ಹಾಗೂ ರಕ್ಷಣೆ ಸಿಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯ ವೇಳೆ ಯುವಕರ ಮೇಲೆ ನಡೆದ ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ ಎಂದು ಅಮಿತ್ ಶಾ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ವಿದ್ಯಾರ್ಥಿಗಳಿಗೆ ಏನಾಯಿತು ಎಂಬುದನ್ನು ಸಂಸತ್ತಿನಲ್ಲಿ ವಿವರಿಸಲು ಅವರು ಧೈರ್ಯ ಮಾಡಲಿಲ್ಲ ಎಂದು ಆರೋಪಿಸಿದ್ದಾರೆ. ಪ್ರತಿಭಟನೆಯಲ್ಲಿ ಗುರಿಯಾಗಿಸಿಕೊಂಡು ದಾಳಿಗೆ ಒಳಗಾಗಿದ್ದ ಐವರು ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಭೇಟಿಯಾದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಈ ವಾಗ್ದಾಳಿ ನಡೆಸಿದರು. ಪ್ರತಿಭಟನೆಯ ವೇಳೆ ಹಲ್ಲೆಗೊಳಗಾಗಿ, ಬಳಿಕವೂ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗೆ ಗುರಿಯಾಗಿರುವ ಆ ವಿದ್ಯಾರ್ಥಿಗಳು ಯಾವುದೇ ತಪ್ಪನ್ನು ಮಾಡಿಲ್ಲ ಮತ್ತು ಅವರು ಕ್ಷಮೆ ಯಾಚಿಸುವ ಅಗತ್ಯವಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದರು.
ಸಂವಿಧಾನ, ಶಿಕ್ಷಣ ವ್ಯವಸ್ಥೆ ಮತ್ತು ಭಾರತದ ಭವಿಷ್ಯಕ್ಕಾಗಿ ಹೋರಾಡಿರುವ ದೇಶದ ಸಾವಿರಾರು ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆಯಿದೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಮಕ್ಕಳನ್ನು ಬಳಸಿ ರಾಜಕೀಯ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ, ಮುಗ್ಧ ಮಕ್ಕಳ ಕುತ್ತಿಗೆಗೆ ಬಂದೂಕುಟ್ಟು ರಾಜಕೀಯ ಮಾಡುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು. ಮಕ್ಕಳು ದೇಶದ ಭವಿಷ್ಯ ಮತ್ತು ಅವರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದ ಅವರು, ರಾಹುಲ್ ಗಾಂಧಿ ಹರಡಲು ಪ್ರಯತ್ನಿಸುತ್ತಿರುವ ಸುಳ್ಳಿನ ಕಂತೆಯನ್ನು ಹಾಗೂ ಅವರ ಆಯ್ಕೆಯ ರಾಜಕೀಯ ಧೋರಣೆಯನ್ನು ಬಯಲಿಗೆಳೆಯಲು ನಾವು ಬಯಸುತ್ತೇವೆ ಎಂದರು. ದೇಶದ ಮಕ್ಕಳು ನಿರ್ಭೀತರಾಗಿರಬೇಕು ಎಂದು ಅವರು ಕರೆ ನೀಡಿದರು.

