ಶಿವಮೊಗ್ಗ : ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ (ರಿ.) ಬೆಂಗಳುೕರು ಹಾಗೂ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ ಮತ್ತು ಹಾವೇರಿ ಜಿಲ್ಲಾ ಘಟಕಗಳ ಪೂಜ್ಯರುಗಳ ನೇತೃತ್ವದಲ್ಲಿ ಆಗಸ್ಟ್ 7ರ ಶುಕ್ರವಾರ ಬೆಳಿಗ್ಗೆ 10:30ಕ್ಕೆ ನಗರದಲ್ಲಿ 'ಸದ್ಬೋಧನ ಪಾದಯಾತ್ರೆ'ಯನ್ನು ಆಯೋಜಿಸಲಾಗಿದೆ ಎಂದು ಸಾಗರ ತಾಲೂಕಿನ ಬಳಸಗೋಡು ಕೇದಾರ ಶಾಖಾ ಭೃಂಗೀಶ್ವರ ಮಠದ ಶ್ರೀ ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಬಳಸಗೋಡು ಭೃಂಗೀಶ್ವರ ಮಠದ ಆವರಣದಲ್ಲಿ ವಿವಿಧ ಧಾರ್ಮಿಕ ಚಟುವಟಿಕೆ, ಧರ್ಮಸಭೆ ಹಾಗೂ ಸದ್ಬೋಧನ ಪಾದಯಾತ್ರೆ ಕುರಿತು ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಧರ್ಮ ಜಾಗೃತಿ ಹಾಗೂ ಲಿಂಗಧಾರಣೆ ಪ್ರೇರಣೆ
ವೀರಶೈವ ಲಿಂಗಾಯತ ಧರ್ಮದ ಮೂಲ ಪರಂಪರೆ, ಆಚಾರ-ವಿಚಾರ, ಸಂಸ್ಕಾರ, ಸಂಸ್ಕೃತಿ ಮತ್ತು ಆಚರಣೆಗಳಿಂದ ಸಮಾಜದ ಸದ್ಭಕ್ತರು ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ಧರ್ಮ ಸಂಸ್ಕಾರ ನೀಡುವ ಸದುದ್ದೇಶವನ್ನು ಸಂಸ್ಥೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಐದು ಜಿಲ್ಲೆಗಳ ತಾಲೂಕು ಕೇಂದ್ರಗಳು, ಹೋಬಳಿ ಹಾಗೂ ಗ್ರಾಮಗಳಲ್ಲಿ ಪೂಜ್ಯರ ನೇತೃತ್ವದಲ್ಲಿ ಸದ್ಬೋಧನ ಪಾದಯಾತ್ರೆ ನಡೆಸಲಾಗುತ್ತದೆ.
ಪಾದಯಾತ್ರೆಯ ಮೂಲಕ ಭಕ್ತರಿಗೆ ಭಸ್ಮ ಮತ್ತು ರುದ್ರಾಕ್ಷಿ ಧಾರಣೆ ಮಾಡಿಸಿ, ನಿಯೋಜಿತ ಕ್ಷೇತ್ರದಲ್ಲಿ ಹಿರಿಯ ಪೂಜ್ಯರಿಂದ ಧರ್ಮ ಸಂದೇಶ ನೀಡುವುದು ಹಾಗೂ ಲಿಂಗಧಾರಣೆಗೆ ಪ್ರೇರಣೆ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಂಸ್ಥೆಯು ಪ್ರತಿ ಎರಡು ತಿಂಗಳಿಗೊಮ್ಮೆ ನಡೆಸುವ ಧರ್ಮ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಇದು ನಡೆಯುತ್ತಿದೆ ಎಂದು ಅವರು ವಿವರಣೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶಿವಗಂಗಾ ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಮತ್ತು ಸಹಕಾರ್ಯದರ್ಶಿಗಳಾದ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳ ಸಮಕ್ಷಮದಲ್ಲಿ ಐದು ಜಿಲ್ಲೆಗಳ ಅಧ್ಯಕ್ಷರು ಹಾಗೂ ಪೂಜ್ಯರ ನಾಯಕತ್ವದಲ್ಲಿ ಈ ಜಾಗೃತಿ ಕಾರ್ಯಕ್ರಮ ಜರುಗಲಿದೆ.
ಲಿಂ. ನೀಲಕಂಠ ಶಿವಾಚಾರ್ಯರ ಪುಣ್ಯಸ್ಮರಣೆ
ಅಂದು ಸಾಗರ ತಾಲೂಕಿನ ಬಳಸಗೋಡು ಕೇದಾರ ಶಾಖಾ ಭೃಂಗೀಶ್ವರ ಮಠದ ಸಂಸ್ಥಾಪಕ ಲಿಂ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳವರ ಪುಣ್ಯಸ್ಮರಣೆಯ ನಿಮಿತ್ತವಾಗಿ ಸಾಗರದಲ್ಲಿ ಈ ಸದ್ಬೋಧನ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಸಭೆಯಲ್ಲಿ ಮಾತನಾಡಿದ ವೇದಮೂರ್ತಿ ಕೊಟ್ರೇಶಯ್ಯ ಕಲ್ಯಾಣಮಠ ಅವರು, ವೀರಶೈವ ಲಿಂಗಾಯತ ಸಮಾಜದ ಹಿರಿಯರ ಹಾಗೂ ಸದ್ಭಕ್ತರ ಸೇವಾ ಸಹಕಾರದಿಂದ ನಗರದಲ್ಲಿ ಪಾದಯಾತ್ರೆ ನಡೆಸಿ, ಭಕ್ತರಿಗೆ ಭಸ್ಮ-ರುದ್ರಾಕ್ಷಿ ಧಾರಣೆ ಮಾಡಿ ಧರ್ಮೋಪದೇಶ ನೀಡಲಾಗುವುದು ಎಂದರು.
ರಾಷ್ಟ್ರೀಯ ಸಂಸ್ಥೆಯ ಹಾಗೂ ಐದು ಜಿಲ್ಲೆಗಳ 15ಕ್ಕೂ ಹೆಚ್ಚು ಪೂಜ್ಯರು ಬಳಸಗೋಡು ಗುರು ನೀಲಕಂಠ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಬಳಸಗೋಡು ಕೇದಾರ ಶಾಖಾ ಭೃಂಗೀಶ್ವರ ಮಠದ ಹಿರಿಯ ಪೂಜ್ಯರ ಗದ್ದುಗೆಗೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ.
ಪಾದಯಾತ್ರೆ ಹಾಗೂ ಕಾರ್ಯಕ್ರಮಗಳ ರೂಪುರೇಷೆ
ಆಗಸ್ಟ್ 7ರ ಶುಕ್ರವಾರ ಬೆಳಿಗ್ಗೆ 10:30ಕ್ಕೆ ಸಾಗರದ ಎಸ್.ಎನ್. ನಗರದ ಶ್ರೀರಾಮಮಂದಿರದಿಂದ ಸದ್ಬೋಧನ ಪಾದಯಾತ್ರೆ ಆರಂಭಗೊಂಡು, ನಗರದ ಶ್ರೀ ವೀರಭದ್ರಸ್ವಾಮಿ ದೇವಾಲಯ ತಲುಪಲಿದೆ. ಅಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ, ನಂತರ ಶ್ರೀ ಭೃಂಗೀಶ್ವರ ಮಠಕ್ಕೆ ಆಗಮಿಸಲಾಗುವುದು. ಮಧ್ಯಾಹ್ನ 12:30 ಗಂಟೆಗೆ ಶಿವಾಚಾರ್ಯರ ಆಂತರಿಕ ಸಭೆ ನಡೆಯಲಿದ್ದು, ಪೂಜಾ ಪ್ರಸಾದ ವಿನಿಯೋಗದ ನಂತರ ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡಲಾಗುವುದು.
ಸಮಾಜ ಬಾಂಧವರಲ್ಲಿ ಉಪಸ್ಥಿತಿಗೆ ಮನವಿ
ಈ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಸಾಗರ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಹಿರಿಯರು, ಯುವಕರು, ತಾಯಂದಿರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತಮ್ಮ ತನು-ಮನ-ಧನದ ಶುದ್ಧ ಭಕ್ತಿ ಸೇವೆಯನ್ನು ಸಮರ್ಪಿಸಿ ಗುರುಕೃಪೆಗೆ ಪಾತ್ರರಾಗಬೇಕೆಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಶಿವಮೊಗ್ಗ ಜಿಲ್ಲಾ ವಕ್ತಾರರಾದ ದುಗ್ಗಿ-ಕಡೇನಂದಿಹಳ್ಳಿ ಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ವಿನಂತಿಸಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಪ್ರಮುಖರು ಭಾಗಿ
ಈ ಪೂರ್ವಭಾವಿ ಸಭೆಯಲ್ಲಿ ವೀರಶೈವ ಸಮುದಾಯದ ಪ್ರಮುಖರಾದ ವೇದಮೂರ್ತಿ ಕೊಟ್ರೇಶಯ್ಯ ಕಲ್ಯಾಣಮಠ, ವೀರಶೈವ ಯುವ ವೇದಿಕೆಯ ಅಧ್ಯಕ್ಷ ಸಚಿನ್ ಕೊಪ್ಪ, ಗುರುಬಸವಯ್ಯ, ನಟರಾಜ್, ಪ್ರಕಾಶ್ ಕಲ್ಸೆ, ರಾಜು ಶಾಂತಪುರ, ಮಲ್ಲಿಕಾರ್ಜುನ, ಚರಂತ್ಯ ಶಾಸ್ತ್ರಿ, ಅಂದಾನಯ್ಯ ಶಾಸ್ತ್ರಿ, ಶಿವರಾಜ ಶಾಸ್ತ್ರಿ ಮಳಲಿ, ಮಹಾರುದ್ರಪ್ಪ ಬಳಸಗೋಡು, ಪ್ರಸಾದ್ ಸ್ವಾಮಿ, ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

