ಬೆಂಗಳೂರು: ರಾಜಧಾನಿಯಲ್ಲಿ ಡೇಟಿಂಗ್ ಆಪ್‌ಗಳ ಮೂಲಕ ಸೈಬರ್ ಹಾಗೂ ಹನಿಟ್ರ್ಯಾಪ್ ಮಾದರಿಯ ಅಪರಾಧಗಳು ಹೆಚ್ಚಾಗುತ್ತಿದ್ದು, ಇದೀಗ ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳು ಯುವಕನನ್ನು ಬಲೆಗೆ ಕೆಡವಿ ಬರೋಬ್ಬರಿ 3.7 ಲಕ್ಷ ರೂಪಾಯಿ ದೋಚಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಎಲೆಕ್ಟ್ರಾನಿಕ್ಸ್ ಸಿಟಿ ಬಳಿ ನಡೆದ ಈ ಭೀಕರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಂದಾಪುರ ನಿವಾಸಿಯೂ ಹಾಗೂ ಖಾಸಗಿ ಕಂಪನಿ ಉದ್ಯೋಗಿಯಾಗಿರುವ 33 ವರ್ಷದ ಜೇಕಬ್ (ಹೆಸರು ಬದಲಾಯಿಸಲಾಗಿದೆ) ವಂಚನೆಗೊಳಗಾದ ದುರದೃಷ್ಟಕರ ಯುವಕ. ಕಳೆದ ಕೆಲವು ತಿಂಗಳುಗಳಿಂದ ಡೇಟಿಂಗ್ ಆಪ್ ಬಳಸುತ್ತಿದ್ದ ಜೇಕಬ್‌ಗೆ 'ಪೂನಂ' ಎಂಬ ಹೆಸರಿನ ಯುವತಿಯ ಪರಿಚಯವಾಗಿತ್ತು. ತಾನು ಎಲೆಕ್ಟ್ರಾನಿಕ್ಸ್ ಸಿಟಿಯ ನಿವಾಸಿ ಎಂದು ಹೇಳಿಕೊಂಡಿದ್ದ ಆಕೆ, ಜೇಕಬ್ ಜೊತೆ ಮೊಬೈಲ್ ಸಂಖ್ಯೆ ಹಂಚಿಕೊಂಡು ನಿರಂತರವಾಗಿ ಮಾತುಕತೆ ನಡೆಸುತ್ತಿದ್ದಳು. ಆಕೆಯ ಮಾತು ನಂಬಿದ ಯುವಕ ಆಕೆಯನ್ನು ಭೇಟಿಯಾಗಲು ಒಪ್ಪಿಕೊಂಡಿದ್ದನು.
ಆಗಸ್ಟ್ 19 ರಂದು ರಾತ್ರಿ ಎಲೆಕ್ಟ್ರಾನಿಕ್ಸ್ ಸಿಟಿಯ ಹುಲಿಮಂಗಲ ಮುಖ್ಯರಸ್ತೆಯಲ್ಲಿರುವ ಪಬ್ ಒಂದರ ಬಳಿ ಬರುವಂತೆ ಪೂನಂ ಜೇಕಬ್‌ನನ್ನು ಆಹ್ವಾನಿಸಿದ್ದಳು. ಅದರಂತೆ ರಾತ್ರಿ 9.45 ರ ಸುಮಾರಿಗೆ ಜೇಕಬ್ ಸ್ಥಳಕ್ಕೆ ತಲುಪಿದಾಗ ಯುವತಿಯು ಬಿಳಿ ಬಣ್ಣದ ಎಸ್‌ಯುವಿ ಕಾರಿನಲ್ಲಿ ಬಂದಿದ್ದಳು. "ಕಾರಿಗೆ ಇಂಧನ ತುಂಬಿಸಿಕೊಂಡು ಬರೋಣ" ಎಂದು ನಂಬಿಸಿ ಜೇಕಬ್‌ನನ್ನು ಕಾರಿಗೆ ಹತ್ತಿಸಿಕೊಂಡು ಪ್ರಯಾಣ ಬೆಳೆಸಿದ್ದಳು. ಮಾರ್ಗಮಧ್ಯೆ ಶೌಚಾಲಯದ ನೆಪ ಹೇಳಿ ಕತ್ತಲಾದ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿದಾಗ, ಪೂರ್ವನಿಯೋಜಿತವಾಗಿ ಸಂಚು ರೂಪಿಸಿದ್ದ ನಾಲ್ವರು ಅಪರಿಚಿತ ವ್ಯಕ್ತಿಗಳು ದಿಢೀರ್ ದಾಳಿ ನಡೆಸಿ ಜೇಕಬ್‌ನನ್ನು ಬೆದರಿಸಿ ಕಾರಿನಲ್ಲೇ ಬಲವಂತವಾಗಿ ಕರೆದೊಯ್ದಿದ್ದಾರೆ.
ನಂತರ ಸಂತ್ರಸ್ತನನ್ನು ಮತ್ತೊಂದು ಬೂದು ಬಣ್ಣದ ಕಾರಿಗೆ ಸ್ಥಳಾಂತರಿಸಿ ನಗರದ ವಿವಿಧೆಡೆ ಸುತ್ತಾಡಿಸಿದ ಗ್ಯಾಂಗ್, ಕೊಲೆ ಬೆದರಿಕೆಯೊಡ್ಡಿ ಆತನ ಬಳಿಯಿದ್ದ 7,000 ರೂ. ನಗದು, ಪರ್ಸ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ಕಸಿದುಕೊಂಡಿದೆ. ಬಲವಂತವಾಗಿ ಪಿನ್ ಪಡೆದು ಎಟಿಎಂನಿಂದ 45,000 ರೂ. ನಗದು ಡ್ರಾ ಮಾಡಿಕೊಂಡಿದ್ದಲ್ಲದೆ, ಕ್ರೆಡಿಟ್ ಕಾರ್ಡ್ ಬಳಸಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಮಾರನೇ ದಿನ ಅಂದರೆ ಆಗಸ್ಟ್ 20 ರ ಬೆಳಗಿನ ಜಾವ, ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್ ಬದಲಿಸಿ 3.2 ಲಕ್ಷ ರೂಪಾಯಿಯನ್ನು ಬೇರೊಂದು ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ 3.7 ಲಕ್ಷ ರೂ. ದೋಚಿದ ಕಿಡಿಗೇಡಿಗಳು, ಬೆಳಿಗ್ಗೆ 10 ಗಂಟೆಗೆ ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ನಿಲ್ದಾಣದ ಬಳಿ ಜೇಕಬ್‌ನನ್ನು ಇಳಿಸಿ, ಪೊಲೀಸರಿಗೆ ದೂರು ನೀಡದಂತೆ ಬೆದರಿಸಿ ಪರಾರಿಯಾಗಿದ್ದಾರೆ.
ತಾನು ಡೇಟಿಂಗ್ ಆಪ್ ಯುವತಿ ಹಾಗೂ ಆಕೆಯ ಗ್ಯಾಂಗ್‌ನಿಂದ ಮೋಸ ಹೋಗಿರುವುದು ಅರಿವಿಗೆ ಬಂದ ತಕ್ಷಣ ಮನೆಗೆ ಮರಳಿದ ಜೇಕಬ್, ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ಪಡೆದುಕೊಂಡು ಆಗಸ್ಟ್ 25 ರಂದು ಹೆಬ್ಬಗೋಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅಪಹರಣ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಯುವತಿ ಪೂನಂ ಹಾಗೂ ಆಕೆಯ ಗ್ಯಾಂಗ್‌ಗಾಗಿ ಬಲೆ ಬೀಸಿದ್ದಾರೆ.

