ಬಿಹಾರ: ಒಂದೆಡೆ ಭಾರತದ ಬಿಹಾರದಲ್ಲಿ ಭಾರಿ ಮಳೆಯಾಗಿ ಈಗಾಗಲೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರ ನಡುವೆ ಭಾರತದ ನದಿಗಳಿಗೆ ನೇಪಾಳ ನೀರು ಹರಿಬಿಟ್ಟಿದ್ದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ನೇಪಾಳದ ವಾಲ್ಮೀಕಿನಗರ ಗಂಡಕ್ ಬ್ಯಾರೇಜ್‌ನಿಂದ ಸುಮಾರು 2 ಲಕ್ಷ 87 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಬಾಗಮತಿ, ಮಹಾನಂದ ಮತ್ತು ಗಂಡಕ್ ನದಿಗಳ ಜೊತೆ ಸೇರಿ ಕೋಸಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ವಾಲ್ಮಿಕಿನಗರ ಗಂಡಕ್ ಬ್ಯಾರೇಜ್‌ನ ಎಲ್ಲಾ 36 ಗೇಟ್‌ಗಳನ್ನು ನೇಪಾಳ ತೆರೆದಿದ್ದು, ಇಂಡೋ-ನೇಪಾಳ ಗಡಿಯಲ್ಲಿರುವ ಚಂಪಾರನ್ನ ತಗ್ಗು ಪ್ರದೇಶದಲ್ಲಿರುವ ಗ್ರಾಮಗಳಿಗೆ ನೀರು ನುಗ್ಗಿದೆ. ಈ ಗ್ರಾಮಗಳಲ್ಲಿ ಸುಮಾರು 8 ಅಡಿ ಎತ್ತರದವರೆಗೆ ನೀರು ನಿಂತಿದ್ದು, ಜನರು ತಮ್ಮ ಮನೆ-ಮಠ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

