Dailyhunt Logo
  • Light mode
    Follow system
    Dark mode
    • Play Story
    • App Story
BIG NEWS: 7 ಕೋಟಿ ಕನ್ನಡಿಗರ ಸೇವೆ ನನ್ನ ಭಾಗ್ಯ: ಸಿಎಂ ಪ್ರಮಾಣವಚನದ ಬಳಿಕ ಡಿಕೆಶಿ ಭಾವುಕ ಪೋಸ್ಟ್!

BIG NEWS: 7 ಕೋಟಿ ಕನ್ನಡಿಗರ ಸೇವೆ ನನ್ನ ಭಾಗ್ಯ: ಸಿಎಂ ಪ್ರಮಾಣವಚನದ ಬಳಿಕ ಡಿಕೆಶಿ ಭಾವುಕ ಪೋಸ್ಟ್!

Kannada News Now 6 days ago

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕೃತವಾಗಿ ಗದ್ದುಗೆಗೇರಿದ ಶ್ರೀ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನತೆಗೆ ವಿನಯಪೂರ್ವಕ ವಾಗ್ದಾನವೊಂದನ್ನು ನೀಡಿದ್ದಾರೆ. ಅಧಿಕಾರ ಸ್ವೀಕರಿಸಿದ ತಕ್ಷಣವೇ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ನಾಡಿನ ಜನತೆಯನ್ನುದ್ದೇಶಿಸಿ ಭಾವುಕ ನುಡಿಗಳನ್ನಾಡಿರುವ ಅವರು, ತಮಗೆ ಸಿಕ್ಕಿರುವ ಈ ಜವಾಬ್ದಾರಿಯನ್ನು ಅತ್ಯಂತ ವಿನೀತನಾಗಿ ಸ್ವೀಕರಿಸುವುದಾಗಿ ಹೇಳಿದ್ದಾರೆ.

7 ಕೋಟಿ ಜನತೆಯ ಸೇವೆ ನನ್ನ ಬದುಕಿನ ಭಾಗ್ಯ!

ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿರುವ ಕುರಿತು ಹರ್ಷ ವ್ಯಕ್ತಪಡಿಸಿರುವ ಡಿ.ಕೆ. ಶಿವಕುಮಾರ್, "ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ನಾನು ಇಂದು ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಮುಖ್ಯಮಂತ್ರಿಯಾಗಿ ರಾಜ್ಯದ ಏಳುಕೋಟಿ ಜನತೆಯ ಸೇವೆ ಮಾಡಲು ಒದಗಿ ಬಂದಿರುವ ಈ ಅವಕಾಶ ನನ್ನ ಬದುಕಿನ ಭಾಗ್ಯ ಎಂದು ವಿನೀತನಾಗಿ ಸ್ವೀಕರಿಸಿದ್ದೇನೆ" ಎಂದು ತಿಳಿಸಿದ್ದಾರೆ.

'ಮನೆ ಮಗನಂತೆ ಕಾಯಾ ವಾಚಾ ಮನಸಾ ಅರ್ಪಿಸಿಕೊಳ್ಳುವೆ'

ತಮ್ಮನ್ನು ರಾಜಕೀಯವಾಗಿ ಈ ಮಟ್ಟಕ್ಕೆ ಬೆಳೆಸಿದ ಜನತೆಗೆ ಧನ್ಯವಾದ ಅರ್ಪಿಸಿರುವ ಅವರು, "ಮನೆ ಮಗನಂತೆ ಹರಸಿ, ಹಾರೈಸಿ ರಾಜಕೀಯ ಕ್ಷೇತ್ರದಲ್ಲಿ ಈ ಹಂತದ ವರೆಗೆ ನನ್ನನ್ನು ಬೆಳೆಸಿದ ಜನತಾ ಜನಾರ್ಧನರಿಗೆ ಕಾಯಾ ವಾಚಾ ಮನಸಾ ನನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು, ಜನರ ಸೇವೆ ಮಾಡುತ್ತೇನೆ ಎಂದು ನಾನು ವಿನಯಪೂರ್ವಕವಾಗಿ ವಾಗ್ದಾನ ಮಾಡುತ್ತೇನೆ. ರಾಜ್ಯದ ಜನತೆಗೆ ನಮ್ಮ ಸರ್ಕಾರ ಮತ್ತು ಹೊಸ ಸಾರಥಿಯಾಗಿ ಬಂದಿರುವ ನನ್ನ ಬಗ್ಗೆ ಬಹಳ ನಿರೀಕ್ಷೆಗಳಿದೆ ಎನ್ನುವುದು ನನಗೆ ಗೊತ್ತಿದೆ" ಎಂದು ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

ಸಮೃದ್ಧ ಕರ್ನಾಟಕದ ಕನಸು: ಕನ್ನಡಿಗರಲ್ಲಿ ಬೊಗಸೆಯೊಡ್ಡಿ ಕೇಳಿದ ಸಿಎಂ

ರಾಜ್ಯದ ಅಭಿವೃದ್ಧಿಯ ದೂರದೃಷ್ಟಿಯ ಬಗ್ಗೆ ಮಾತನಾಡಿದ ಸಿಎಂ, "ಇಂದು ಕರ್ನಾಟಕ ಜಗಮೆಚ್ಚುತ್ತಿರುವ ಹೆಮ್ಮೆಯ ರಾಜ್ಯವಾಗಿದೆ. ಅಭಿವೃದ್ದಿ ಪಥದಲ್ಲಿರುವ ಕರ್ನಾಟಕವನ್ನು ಸಮೃದ್ಧ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಜ್ಯವನ್ನಾಗಿ ರೂಪಿಸಬೇಕೆಂಬ ಕನಸು ನನ್ನದು. ಅದನ್ನು ನನಸು ಮಾಡಲು ವಿಶ್ವಾಸಪೂರ್ವಕವಾಗಿ ಸಹಕಾರ ನೀಡಬೇಕೆಂದು ಏಳು ಕೋಟಿ ಕನ್ನಡಿಗರಲ್ಲಿ ಬೊಗಸೆಯೊಡ್ಡಿ ಕೇಳಿಕೊಳ್ಳುತ್ತಿದ್ದೇನೆ" ಎಂದು ನಾಡಿನ ಜನತೆಯ ಬೆಂಬಲ ಕೋರಿದ್ದಾರೆ.

ಹೈಕಮಾಂಡ್ ಹಾಗೂ ಶಾಸಕ ಮಿತ್ರರಿಗೆ ಕೃತಜ್ಞತೆ

ತಮ್ಮ ಮೇಲೆ ನಂಬಿಕೆಯಿಟ್ಟ ಪಕ್ಷ ಮತ್ತು ಸಹೋದ್ಯೋಗಿಗಳಿಗೆ ಧನ್ಯವಾದ ಸಲ್ಲಿಸಿರುವ ಡಿ.ಕೆ. ಶಿವಕುಮಾರ್, "ಪಕ್ಷದ ಮೇಲಿನ ನಿಷ್ಠೆ ಮತ್ತು ಜನಸೇವೆ ಮಾಡುವ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಮುಖ್ಯಮಂತ್ರಿಯಾಗಿ ಸೇವೆಗೈಯ್ಯುವ ಅವಕಾಶ ನೀಡಿದ ಕಾಂಗ್ರೆಸ್ ಪಕ್ಷಕ್ಕೆ, ನನ್ನ ಮೇಲೆ ವಿಶ್ವಾಸ ಇಟ್ಟು ತಮ್ಮ ನಾಯಕನಾಗಿ ಆಯ್ಕೆ ಮಾಡಿರುವ ಶಾಸಕ ಮಿತ್ರರಿಗೆ ನಾನು ಆಭಾರಿಯಾಗಿದ್ದೇನೆ. ಮತ್ತೊಮ್ಮೆ ತಮ್ಮೆಲ್ಲರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ-ವಿಶ್ವಾಸ ಸದಾ ನನ್ನ ಮೇಲಿರಲಿ" ಎಂದು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now