ದಾವಣಗೆರೆ : ದಾವಣಗೆರೆಯ ಖಾಸಗಿ ಬ್ಯಾಂಕ್ ಉದ್ಯೋಗಿಯೊಬ್ಬರು ಸಹೋದ್ಯೋಗಿಗಳ ಕಿರುಕುಳ ಹಾಗೂ ಸಾಲದ ಒತ್ತಡಕ್ಕೆ ಮಣಿದು, ಸೆಲ್ಫಿ ವಿಡಿಯೋ ಹಂಚಿಕೊಂಡು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ನಾಪತ್ತೆಯಾದ ವ್ಯಕ್ತಿಯನ್ನು ಅರ್‌ಡಿ ಮೋಹನ್ ಕುಮಾರ್ (37) ಎಂದು ಗುರುತಿಸಲಾಗಿದೆ.
ತುಂಗಾ ಕಾಲುವೆಯಲ್ಲಿ ಇವರ ಬೈಕ್ ಪತ್ತೆಯಾಗಿರುವುದರಿಂದ, ಬೈಕ್ ಸಮೇತ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ತಮ್ಮ ಅಂತಿಮ ನಿರ್ಧಾರಕ್ಕೂ ಮುನ್ನ ಮೋಹನ್ ಕುಮಾರ್ ಸೆಲ್ಫಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. "ನನ್ನ ಸಾವಿಗೆ ಬ್ಯಾಂಕ್ ಸಿಬ್ಬಂದಿಯ ಕಿರುಕುಳ ಮತ್ತು ಕೊಟ್ರೇಶ್ ಎಂಬುವವರಿಂದ ಮಾರ್ಕ್ಸ್ ಕಾರ್ಡ್ ಪಡೆಯಲು ಮಾಡಿದ ಸಾಲವೇ ಕಾರಣ. ಸಾಲ ಮಾಡಿ ಮಾರ್ಕ್ಸ್ ಕಾರ್ಡ್ ಮಾಡಿಸಿದರೂ ಪ್ರಮೋಷನ್ ಸಿಗಲಿಲ್ಲ, ಇತ್ತ ಸಾಲದ ಹೊರೆ ಹೆಚ್ಚಾಯಿತು. ಸಿಬ್ಬಂದಿ ತಿಪ್ಪೇಶ್, ಕೊಟ್ರೇಶ್ ಹಾಗೂ ಇತರರು ಲಂಚ ಪಡೆದು ನನಗೆ ಮೋಸ ಮಾಡಿದ್ದಾರೆ" ಎಂದು ಕಣ್ಣೀರಿಡುತ್ತಾ ಆರೋಪಿಸಿದ್ದಾರೆ. ಜೊತೆಗೆ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರಿಗೆ ತಮಗೆ ನ್ಯಾಯ ಕೊಡಿಸುವಂತೆ ವೀಡಿಯೋದಲ್ಲಿ ಮನವಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾಲುವೆಯಲ್ಲಿ ಮೋಹನ್ ಕುಮಾರ್ ಅವರಿಗಾಗಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

