Dailyhunt Logo
  • Light mode
    Follow system
    Dark mode
    • Play Story
    • App Story
BIG NEWS : 'ಜೆಡಿಎಸ್ ಅಸ್ತಿತ್ವಕ್ಕೆ ನನ್ನ ಹೆಸರೇ ಬೇಕಾಗಿದೆ' : ಕುಮಾರಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ

BIG NEWS : 'ಜೆಡಿಎಸ್ ಅಸ್ತಿತ್ವಕ್ಕೆ ನನ್ನ ಹೆಸರೇ ಬೇಕಾಗಿದೆ' : ಕುಮಾರಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ

Kannada News Now 1 week ago

ಬೆಂಗಳೂರು: ತಮ್ಮ ನಾಲಿಗೆ ಹಾಗೂ ಕಾರ್ಯವೈಖರಿ ಕುರಿತು ಟೀಕೆ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರಿಗೆ ಸಚಿವ ಪ್ರಿಯಾಂಕ ಖರ್ಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜೆಡಿಎಸ್‌ಗೆ ಈಗ ತಮ್ಮ ಹೆಸರೇ ಬೇಕಾಗಿದೆ ಎಂದು ವ್ಯಂಗ್ಯವಾಡಿರುವ ಅವರು, "ಇಷ್ಟು ದಿನ ಬಿಜೆಪಿಗೆ ನನ್ನ ಹೆಸರು ಬೇಕಿತ್ತು, ಈಗ ಜೆಡಿಎಸ್‌ನವರಿಗೂ ನಾನೇ ಬೇಕಾಗಿದ್ದೇನೆ.

ನನ್ನಿಂದ ಅವರ ರಾಜಕೀಯ ಅಸ್ತಿತ್ವ ಉಳಿಯುತ್ತದೆ ಎಂದಾದರೆ ಅವರು ನನ್ನ ಬಗ್ಗೆ ಏನು ಬೇಕಾದರೂ ಮಾತನಾಡಿಕೊಳ್ಳಲಿ" ಎಂದು ಸವಾಲು ಹಾಕಿದ್ದಾರೆ.

ಹಿಂದಿನ ಘಟನೆಗಳನ್ನು ನೆನಪಿಸಿದ ಸಚಿವ ಖರ್ಗೆ, ಹೆಚ್.ಡಿ. ಕುಮಾರಸ್ವಾಮಿ ಅವರು ಹಿಂದೆ ಆರ್‌ಎಸ್‌ಎಸ್ (RSS) ಅನ್ನು 'ವಿಷಸರ್ಪ' ಎಂದು ಬರೆದಿದ್ದನ್ನು ಪ್ರಸ್ತಾಪಿಸಿದರು. "ಅವರು ಆ ರೀತಿ ಬರೆದಾಗ ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೆ. ಆದರೆ ಇಂದು ಅಧಿಕಾರಕ್ಕಾಗಿ ತಮ್ಮ ತತ್ವ ಮತ್ತು ಸಿದ್ಧಾಂತಗಳನ್ನು ಬಲಿಕೊಟ್ಟು ಹೋಗಿರುವ ಕುಮಾರಸ್ವಾಮಿ ಅವರ ಬಗ್ಗೆ ನಾನೇನು ಹೇಳಲಿ? ಬಿಜೆಪಿ ಮತ್ತು ಜೆಡಿಎಸ್‌ನಿಂದ ನಾನು ಕಲಿಯಬೇಕಾದದ್ದು ಏನೂ ಇಲ್ಲ" ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಐಎಎಸ್ ಅಧಿಕಾರಿ ನಾಪತ್ತೆಯಾಗಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, "ಸಂಬಂಧಪಟ್ಟ ಐಎಎಸ್ ಅಧಿಕಾರಿ ಎಲ್ಲಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿದೆ. ಆ ಅಧಿಕಾರಿ ಲಿಖಿತವಾಗಿ ರಜೆ ಅರ್ಜಿ ನೀಡಿ ತೆರಳಿದ್ದಾರೆ. ಅವರನ್ನು ವಶಕ್ಕೆ ಪಡೆದಿದ್ದೇವೆಯೇ ಅಥವಾ ಅವರು ಓಡಿ ಹೋಗಿದ್ದಾರೆಯೇ ಎಂಬ ಸಾಮಾನ್ಯ ಮಾಹಿತಿ ನಮಗೆ ತಿಳಿಯುತ್ತದೆ. ಮಾಹಿತಿ ಕೊರತೆಯಿಂದಲೋ ಅಥವಾ ಸಾಮಾನ್ಯ ಪ್ರಜ್ಞೆಯ ಅಭಾವದಿಂದಲೋ ಕುಮಾರಸ್ವಾಮಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಧಿಕಾರಿ ಬಂದ ಮೇಲೆ ವಿಚಾರಣೆ ನಡೆಸೋಣ, ಈ ಬಗ್ಗೆ ಕುಮಾರಸ್ವಾಮಿಯವರಿಗಾಗಲಿ ಅಥವಾ ಬಿಜೆಪಿಯವರಿಗಾಗಲಿ ಸ್ಪಷ್ಟನೆ ನೀಡುವ ಅಗತ್ಯ ನಮಗಿಲ್ಲ" ಎಂದರು.

ಕೆಪಿಎಸ್ಸಿ (KPSC) ಹಗರಣದ ವಿಷಯವನ್ನು ಪ್ರಸ್ತಾಪಿಸಿದ ಸಚಿವರು, "ಶಿವಶಂಕರ ಸಾಹುಕಾರ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದು ಯಾರು? ಅವರು ಹಣ ಕೊಟ್ಟು ಅಧ್ಯಕ್ಷರಾಗಿದ್ದಾರೆ ಎಂಬ ಮಾತು ನಿಜವೇ? ಶಿವಶಂಕರಪ್ಪ ಅವರ ಮನೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಫೋಟೋ ಇರುವುದು ಸತ್ಯವೇ? ಈ ಎಲ್ಲಾ ವಿಚಾರಗಳನ್ನು ಕುಮಾರಸ್ವಾಮಿ ಅವರ ಸ್ನೇಹಿತರೇ ಹೇಳುತ್ತಿದ್ದಾರೆ, ಇದಕ್ಕೆ ಅವರು ಏನು ಉತ್ತರ ನೀಡುತ್ತಾರೆ?" ಎಂದು ಪ್ರಶ್ನಿಸಿದರು. ಪ್ರಿಯಾಂಕ ಖರ್ಗೆ ವಿರುದ್ಧ ಮಾತನಾಡಿದರೆ ಜೆಡಿಎಸ್ ಮತ್ತು ಬಿಜೆಪಿಗೆ ಮಾಧ್ಯಮಗಳಲ್ಲಿ ದಿನವೂ ಪ್ರಚಾರ ಹಾಗೂ ಅಂಕ ಸಿಗುತ್ತದೆ, ಅದಕ್ಕಾಗಿಯೇ ಅವರು ತಮ್ಮ ವಿರುದ್ಧ ನಿರಂತರವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಚಿವ ಖರ್ಗೆ ಕಿಡಿಕಾರಿದರು.

Dailyhunt
Disclaimer: This content has not been generated, created or edited by Dailyhunt. Publisher: Kannada News Now