ನವದೆಹಲಿ: ದೇಶವನ್ನು ಉದ್ದೇಶಿಸಿ ಪ್ರಸಾರವಾದ 'ಮನ್ ಕಿ ಬಾತ್' ಕಾರ್ಯಕ್ರಮದ 137ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, 'ವಿಕಸಿತ ಭಾರತ' ನಿರ್ಮಾಣಕ್ಕೆ ಯುವಜನತೆ ಮಾದಕ ವ್ಯಸನದಿಂದ ದೂರವಿರುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ದೇಶವನ್ನು ಸಂಪೂರ್ಣವಾಗಿ 'ಡ್ರಗ್ಸ್ ಫ್ರೀ' ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಮಾದಕ ದ್ರವ್ಯಗಳ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕೆಂದು ಕರೆ ನೀಡಿದರು. ಮಾದಕ ವ್ಯಸನವು ಕೇವಲ ಒಬ್ಬ ವ್ಯಕ್ತಿಯನ್ನಷ್ಟೇ ಅಲ್ಲದೆ, ಇಡೀ ಕುಟುಂಬ ಮತ್ತು ಸಮಾಜವನ್ನೇ ನಾಶಮಾಡುತ್ತದೆ. ಹೀಗಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇದರ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಅಭಿಯಾನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ದೇಶದ ಜನತೆಗೆ ಪ್ರಧಾನಿ ಮನವಿ ಮಾಡಿದರು.
ಮಾದಕ ವಸ್ತುಗಳ ವಿರುದ್ಧದ ಜಾಗೃತಿ ಅಭಿಯಾನದಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಹಾಗೂ ಯುವಜನತೆ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪ್ರಧಾನಿ ಮೋದಿ ಆಶಿಸಿದರು. ಹಾಡುಗಳು, ಸೋಷಿಯಲ್ ಮೀಡಿಯಾ ಸ್ಲೋಗನ್‌ಗಳು ಹಾಗೂ ಕಿರು ನಾಟಕಗಳ (ಸ್ಟ್ರೀಟ್ ಪ್ಲೇ) ಮೂಲಕ ಯುವಸಮುದಾಯಕ್ಕೆ ತಲುಪುವಂತೆ ವಿಭಿನ್ನ ಭಾಷೆಗಳಲ್ಲಿ ಜಾಗೃತಿ ಸಂದೇಶಗಳನ್ನು ಬಿತ್ತರಿಸಬೇಕು ಎಂದು ಅವರು ಸಲಹೆ ನೀಡಿದರು. ಸರ್ಕಾರದ 'ನಶಾ ಮುಕ್ತ ಯುವ ಅಭಿಯಾನ'ಕ್ಕೆ ವ್ಯಾಪಕ ಬೆಂಬಲ ಸಿಗುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಮಾದಕ ದ್ರವ್ಯಗಳ ವಿರುದ್ಧದ ಈ ಹೋರಾಟವನ್ನು ಪ್ರತಿಯೊಬ್ಬರೂ ತಮ್ಮ ಮನೆ-ಮನಗಳಿಂದಲೇ ಆರಂಭಿಸಬೇಕು ಎಂದರು.
ಇದೇ ವೇಳೆ, ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಕೇಂದ್ರ ಸರ್ಕಾರದ 'ಸ್ವನಿಧಿ ಯೋಜನೆ' ವಹಿಸುತ್ತಿರುವ ಮಹತ್ವದ ಪಾತ್ರವನ್ನು ಪ್ರಧಾನಿ ಪ್ರಸ್ತಾಪಿಸಿದರು. ಸ್ವನಿಧಿ ಯೋಜನೆಯ ನೆರವಿನಿಂದ ದೇಶದ ಲಕ್ಷಾಂತರ ಮಹಿಳೆಯರು ಸ್ವಂತ ಉದ್ಯೋಗ ಹಾಗೂ ವ್ಯಾಪಾರ ಆರಂಭಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ನಮ್ಮ ಸರ್ಕಾರವು ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಸಂಪೂರ್ಣವಾಗಿ ಬದ್ಧವಾಗಿದ್ದು, ಈ ಯೋಜನೆಗಳು ಕೆಳಹಂತದ ಶ್ರಮಿಕ ವರ್ಗಕ್ಕೆ ಹೊಸ ಭರವಸೆಯನ್ನು ತಂದೊಡ್ದಿವೆ ಎಂದು ಪ್ರಧಾನಿಯವರು ಹರ್ಷ ವ್ಯಕ್ತಪಡಿಸಿದರು.
ಸ್ವನಿಧಿ ಯೋಜನೆಯ ಯಶಸ್ಸಿಗೆ ಉದಾಹರಣೆಯಾಗಿ ಕರ್ನಾಟಕದ ಕಲಬುರಗಿಯ ನಿಂಗಮ್ಮ ಎಂಬ ಮಹಿಳೆಯ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್‌ನಲ್ಲಿ ವಿಶೇಷವಾಗಿ ಸ್ಮರಿಸಿದರು. ಕಲಬುರಗಿಯ 'ನಂದಿ ಬಸವೇಶ್ವರ ರೊಟ್ಟಿ ಕೇಂದ್ರ' ನಡೆಸುತ್ತಿರುವ ನಿಂಗಮ್ಮ ಅವರ ಶ್ರಮ ಮತ್ತು ಸಾಧನೆಯನ್ನು ಬಹುವಾಗಿ ಶ್ಲಾಘಿಸಿದ ಪ್ರಧಾನಿ, ಅವರು ಸ್ವತಃ ರೊಟ್ಟಿ ತಯಾರಿಸಿ ಮಾರಾಟ ಮಾಡುವ ಮೂಲಕ ಸ್ವಾಭಿಮಾನಿ ಜೀವನ ನಡೆಸುತ್ತಿದ್ದಾರೆ ಎಂದರು. ನಿಂಗಮ್ಮ ತಮ್ಮ ದುಡಿಮೆಯಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿರುವುದಷ್ಟೇ ಅಲ್ಲದೆ, ಹಲವು ಸ್ಥಳೀಯ ಮಹಿಳೆಯರಿಗೆ ಉದ್ಯೋಗ ನೀಡಿ ಆಸರೆಯಾಗಿದ್ದಾರೆ ಎಂದು ಅವರ ಉದ್ಯಮಶೀಲತೆಯನ್ನು ಪ್ರಶಂಸಿಸಿದರು.

