Dailyhunt Logo
  • Light mode
    Follow system
    Dark mode
    • Play Story
    • App Story
BIG NEWS : ರಾಜ್ಯ ಕಾಂಗ್ರೆಸ್ ನಲ್ಲಿ ಹೆಚ್ಚಾದ ಸಚಿವ ಸ್ಥಾನಕ್ಕೆ ಲಾಬಿ : ಪಕ್ಷದಲ್ಲಿ ಸ್ಫೋಟಗೊಳ್ಳುತ್ತ ಅಸಮಾಧಾನ?

BIG NEWS : ರಾಜ್ಯ ಕಾಂಗ್ರೆಸ್ ನಲ್ಲಿ ಹೆಚ್ಚಾದ ಸಚಿವ ಸ್ಥಾನಕ್ಕೆ ಲಾಬಿ : ಪಕ್ಷದಲ್ಲಿ ಸ್ಫೋಟಗೊಳ್ಳುತ್ತ ಅಸಮಾಧಾನ?

Kannada News Now 1 week ago

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ನಾಯಕತ್ವ ಬದಲಾವಣೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಜೂನ್ 3ರ ಬುಧವಾರದಂದು ರಾಜಭವನದಲ್ಲಿ ಆಯೋಜಿಸಲಾಗಿರುವ ಸರಳ ಸಮಾರಂಭದಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಆದರೆ, ಹೊಸ ಸರ್ಕಾರದ ರಚನೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ, ನೂತನ ಸಚಿವ ಸಂಪುಟ ಸೇರ್ಪಡೆ ಕುರಿತಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಭಾರಿ ತಲೆನೋವು ಶುರುವಾಗಿದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಮತ್ತು ಯಾರನ್ನು ಕೈಬಿಡಬೇಕು ಎಂಬುದು ಸದ್ಯದ ದೊಡ್ಡ ಸವಾಲಾಗಿದೆ.

ದೆಹಲಿಗೆ ದೌಡಾಯಿಸಿದ ಸಿದ್ದರಾಮಯ್ಯ, ಡಿಕೆಶಿ

ಸಚಿವ ಸಂಪುಟ ರಚನೆಯ ಗೊಂದಲವನ್ನು ಬಗೆಹರಿಸಿಕೊಳ್ಳಲು ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್‌ನ ಪ್ರಮುಖ ನಾಯಕರೊಂದಿಗೆ ಇವರಿಬ್ಬರೂ ಮಹತ್ವದ ಸಭೆ ನಡೆಸಲಿದ್ದು, ಯಾರಿಗೆ ಯಾವ ಸಚಿವ ಸ್ಥಾನ ನೀಡಬೇಕು ಮತ್ತು ಖಾತೆಗಳ ಹಂಚಿಕೆ ಹೇಗೆ ಮಾಡಬೇಕು ಎನ್ನುವುದರ ಕುರಿತು ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಆದರೆ, ಈ ಇಬ್ಬರು ನಾಯಕರು ದೆಹಲು ತಲುಪುವ ಮುನ್ನವೇ ರಾಜ್ಯದ ಹಲವು ಹಿರಿಯ ನಾಯಕರು ಅಲ್ಲಿ ಬೀಡುಬಿಟ್ಟಿರುವುದು ಹೈಕಮಾಂಡ್‌ಗೆ ಮತ್ತಷ್ಟು ಒತ್ತಡ ತಂದಿದೆ.

ಹೈಕಮಾಂಡ್‌ಗೆ ನುಂಗಲಾರದ ತುಪ್ಪವಾದ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಹುದ್ದೆ

ಹೊಸ ಸಂಪುಟದಲ್ಲಿ ಪ್ರಾದೇಶಿಕ ಮತ್ತು ಸಮುದಾಯಗಳ ಸಮತೋಲನ ಕಾಯ್ದುಕೊಳ್ಳಲು 'ನಾಲ್ಕು ಉಪಮುಖ್ಯಮಂತ್ರಿ (ಡಿಸಿಎಂ)' ಹುದ್ದೆಗಳನ್ನು ಸೃಷ್ಟಿಸಬೇಕೇ ಅಥವಾ ಬೇಡವೇ ಎಂಬ ಗಂಭೀರ ಚಿಂತನೆಯಲ್ಲಿ ಹೈಕಮಾಂಡ್ ತೊಡಗಿದೆ. ಇದರ ಜೊತೆಗೆ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿರುವುದರಿಂದ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬ ವಿಚಾರವೂ ಪಕ್ಷದ ವರಿಷ್ಠರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಈ ಎರಡು ಪ್ರಮುಖ ನಿರ್ಧಾರಗಳು ಸದ್ಯ ಇಡೀ ಸಚಿವ ಸಂಪುಟ ರಚನೆಯ ಪ್ರಕ್ರಿಯೆಯನ್ನು ಕಗ್ಗಂಟಾಗಿಸಿವೆ.

ಯತೀಂದ್ರ ಸಿದ್ದರಾಮಯ್ಯಗೆ ಸಚಿವ ಸ್ಥಾನ ಬಹುತೇಕ ಫಿಕ್ಸ್?

ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಯತೀಂದ್ರ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎನ್ನುವ ಸುದ್ದಿ ಹರಡುತ್ತಿದ್ದಂತೆ, ಪಕ್ಷಕ್ಕಾಗಿ ದುಡಿದ ನಮಗೂ ಸಚಿವ ಸ್ಥಾನ ಸಿಗಲೇಬೇಕು ಎಂದು ಹಲವು ಹಿರಿಯ ನಾಯಕರು ಪಟ್ಟು ಹಿಡಿದಿದ್ದಾರೆ. ಇದು ಹೈಕಮಾಂಡ್ ಮಟ್ಟದಲ್ಲಿ ಮತ್ತೊಂದು ಸುತ್ತಿನ ಅಸಮಾಧಾನ ಅಥವಾ ಬಂಡಾಯ ಏಳದಂತೆ ತಡೆಯಲು ನಾಯಕರು ಹರಸಾಹಸ ಪಡುವಂತೆ ಮಾಡಿದೆ.

ದೆಹಲಿಯಲ್ಲಿ ಹಿರಿಯ ಶಾಸಕರು ಮತ್ತು ಪರಿಷತ್ ಸದಸ್ಯರ ಭಾರಿ ಲಾಬಿ

ಸಚಿವ ಸ್ಥಾನ ಆಕಾಂಕ್ಷಿಗಳ ದಂಡೇ ಈಗ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರಲು ಭಾರಿ ಲಾಬಿ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಶಿವಾನಂದ್ ಪಾಟೀಲ್, ಬಿ.ಕೆ. ಹರಿಪ್ರಸಾದ್, ಸತೀಶ್ ಜಾರಕಿಹೊಳಿ, ಡಾ. ಎಂ.ಸಿ. ಸುಧಾಕರ್ ಮತ್ತು ಡಾ. ಅಜಯ್ ಸಿಂಗ್ ಸೇರಿದಂತೆ ಹಲವು ಪ್ರಮುಖ ನಾಯಕರು ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಕೇವಲ ವಿಧಾನಸಭಾ ಸದಸ್ಯರು ಮಾತ್ರವಲ್ಲದೆ, ವಿಧಾನ ಪರಿಷತ್ (ಎಂಎಲ್‌ಸಿ) ಸದಸ್ಯರು ಕೂಡ ತಮಗೂ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಬಿಗಿಪಟ್ಟು ಹಿಡಿದಿರುವುದು ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now