Kannada News Now
1.7M Followers ಬೆಂಗಳೂರು: ಉಕ್ರೇನ್ ನಿಂದ ನವೀನ್ ಮೃತ ದೇಹವನ್ನು ತರುವ ಅಸಾಧ್ಯವಾದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರ ( PM Narendra Modi ) ಭಗೀರಥ ಪ್ರಯತ್ನದಿಂದ ಸಾಧಿಸಿ, ಐತಿಹಾಸಿಕ ಕೆಲಸವನ್ನು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು.
ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನವೀನ್ ಮೃತದೇಹವನ್ನು ಬರಮಾಡಿಕೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಕ್ರೇನ್ ಸುತ್ತಲಿನ ಎಲ್ಲಾ ದೇಶಗಳ ಸಂಪರ್ಕವನ್ನು ಬೆಳೆಸಿ ರಾಜತಾಂತ್ರಿಕವಾಗಿ ವಿಮಾನನಿಲ್ದಾಣದಲ್ಲಿ ವಿಶೇಷ ವಿಮಾನಗಳಿಗೆ ಅನುಮತಿ ಪಡೆದು ಕರೆತರಲಾಗಿದೆ. ಇಡೀ ಪ್ರಕ್ರಿಯೆ ಸಮನ್ವಯದ ಆಧಾರದ ಮೇಲೆಯೇ ಆಗಿದೆ. ನವೀನ್ ವೈದ್ಯಕೀಯ ಶಿಕ್ಷಣ ಮುಗಿಸಿ ಹಿಂದಿರುಗುವ ವೇಳೆಗೆ ಅವನ ತಂದೆತಾಯಿಗಳು ಬರಮಾಡಿಕೊಳ್ಳಬೇಕಿತ್ತು. ಆದರೆ ನವೀನ್ ಮೃತದೇಹವನ್ನು ಬರಮಾಡಿಕೊಳ್ಳಬೇಕಿರುವುದು ಅತ್ಯಂತ ನೋವಿನ ಸಂಗತಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಆಪರೇಷನ್ ಗಂಗಾ
ಯುದ್ಧ ಭೂಮಿಯಿಂದಲೂ ಹಲವಾರು ವಿದ್ಯಾರ್ಥಿಗಳು ವಾಪಸ್ಸಾಗಿದ್ದಾರೆ. ದುರ್ದೈವವಶಾತ್ ನವೀನ್ ಮಿಸೈಲಿನ ಮೆಟಲ್ ಬಡಿದು ತೀರಿಹೋಗಿದ್ದಾನೆ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕುಟುಂಬವನ್ನು ಸಂಪರ್ಕಿಸಿ ಧೈರ್ಯ ಹೇಳಿದ್ದರು. ಆಪರೇಷನ್ ಗಂಗಾ ನಲ್ಲಿ ಕರ್ನಾಟಕದ 62 ವಿದ್ಯಾರ್ಥಿಗಳು ಆಪರೇಷನ್ ಗಂಗಾ ಪ್ರಾರಂಭವಾಗುವ ಮುಂಚೆಯೇ ಬಂದಿದ್ದಾರೆ. 3 ವಾರಗಳ ಕಾಲ ನಡೆದ ಆಪರೇಷನ್ ಗಂಗಾ ಸುಲಭದ ಮಾತಲ್ಲ. ಬೇರೆ ಯಾವ ರಾಷ್ಟ್ರಗಳೂ ತನ್ನ ನಾಗರಿಕರನ್ನು ಕರೆಸುವ ಇಷ್ಟು ದೊಡ್ಡ ಪ್ರಯತ್ನ ವನ್ನು ಮಾಡಿಲ್ಲ. ಅವರವರ ಹಣೆಬರಹಕ್ಕೆ ಬಿಟ್ಟಿದ್ದರು ಎಂದರು.
ಕರ್ನಾಟಕದ 572 ವಿದ್ಯಾರ್ಥಿಗಳು ವಾಪಸ್
ಇಡೀ ದೇಶದ 19000 ವಿದ್ಯಾರ್ಥಿಗಳನ್ನು ವಾಪಸ್ಸು ಕರೆತರಲಾಗಿದ್ದು, ಕರ್ನಾಟಕದ 572 ಜನ ಹಿಂದಿರುಗಿದ್ದಾರೆ. ಪ್ರಧಾನ ಮಂತ್ರಿಗಳ ಕಚೇರಿ ಹಾಗೂ ವಿದೇಶಾಂಗ ಸಚಿವ ಜಯಶಂಕರ್ ಅವರೊಂದಿಗೂ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಂಸತ್ ಸದಸ್ಯರೂ ಸಹ ಸಂಪರ್ಕದಲ್ಲಿದ್ದು ಪ್ರಯತ್ನ ಮಾಡಿದ್ದಾರೆ ಎಂದರು.
ಯುದ್ಧಪೀಡಿತ ರಾಷ್ಟ್ರದಿಂದ ಭಾರತಕ್ಕೆ ನವೀನ್ ಮೃತದೇಹ ತಂದಿದ್ದು ಹೇಗೆ ಗೊತ್ತಾ.?
ಅಂತ್ಯಕ್ರಿಯೆಗೆಂದೇ ಇರುವ ಪ್ಯೂನೆರಲ್ ಏಜೆಂಟ್ ಅನ್ನು ಸಂಪರ್ಕಿಸಿ, ದೇಹವನ್ನು ಪಡೆಯಲಾಗಿತು. ನಂತರ ಎಂಬಾಮಿಂಗ್ (embalming) ಮಾಡಲು ಸಾಧ್ಯವಾಯಿತು. ಶವಾಗಾರದ ಬಳಿ ಇನ್ನೂ ಶೇಲ್ಲಿಂಗ್ ನಡೆಯುತ್ತಿದ್ದರೂ ಅಲ್ಲಿಂದ ವಾರ್ಸೊವಾಕ್ಕೆ ತಂದು ಅಲ್ಲಿ ಪುನಃ ಜಿಂಕ್ ಕೋಟಿಂಗ್ ಮಾಡಿ ದುಬೈಗೆ ತಂದು, ಅಲ್ಲಿಂದ ಬೆಂಗಳೂರಿಗೆ ತರಲಾಗಿದೆ. ಪ್ರಧಾನ ಮಂತ್ರಿಗಳಿಗೆ ಈಗಾಗಲೇ ಧನ್ಯವಾದಗಳನ್ನು ಹೇಳಲಾಗಿದೆ. ಅಸಾಧ್ಯವಾಗಿರುವ ಕೆಲಸವನ್ನು ಅವರ ಭಗೀರಥ ಪ್ರಯತ್ನದಿಂದ ಸಾಧ್ಯವಾಗಿದೆ. ಕನ್ನಡಿಗರ ಪರವಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಲಿಬಿಯಾದಲ್ಲಿಯೂ ಐಎಸ್ ಐ ದಾಳಿ ಮಾಡಿದಾಗಲೂ ಭಾರತೀಯರನ್ನು ತೆರವು ಮಾಡಲಾಗಿತ್ತು. ದೇಶ ಒಂದ ಶಕ್ತಿ ಏನು ಎನ್ನುವದು ಇಂಥ ಸಂದರ್ಭಗಳಲ್ಲಿ ತಿಳಿಯುತ್ತದೆ ಎಂದರು.
ಮಾನವೀಯತೆ ಮೆರೆದ ಪ್ರಧಾನಿಗಳು
ನಮ್ಮ ತಾಕತ್ತು ಏನೆಂದು ನರೇಂದ್ರ ಮೋದಿಯವರು ತೋರಿಸಿದ್ದಾರೆ. ಟೀಕೆ ಮಾಡುವವರು ಬಹಳ ಜನ ಇದ್ದಾರೆ. ಇದನ್ನು ಪ್ರಾಮಾಣಿಕವಾಗಿ ಮಾಡಿ ಯಶ್ವಸ್ವಿಯಾಗುವುದು ಮಾನವೀಯ ಗುಣಗಳು. ಮಾನವೀಯತೆಯನ್ನು ಪ್ರಧಾನ ಮಂತ್ರಿಗಳು ಮೆರೆದಿದ್ದಾರೆ ಎಂದರು.
ಕರ್ನಾಟಕ ಸರ್ಕಾರದ ಕಾಳಜಿ
ತೆರವುಗೊಳಿಸುವ ಸಮಯದಲ್ಲಿ ಬೆಂಗಳೂರು ಮಾತ್ರವಲ್ಲದೆ, ದೆಹಲಿ, ಗಜಿಯಾಬಾದ್, ಮುಂಬೈ ನಗರಗಳಿಂದ ಮನೆಗೆ ಮುಟ್ಟಿಸುವವರೆಗೂ ಕರ್ನಾಟಕ ಸರ್ಕಾರ ಕಾಳಜಿ ವಹಿಸಿದೆ. ಇದರಲ್ಲಿ ಕರ್ನಾಟಕ ಸರ್ಕಾರದ ಪಾತ್ರವೂ ಹಿರಿದಿದೆ. ಮೊದಲಿಗೆ ವಾಟ್ಸಾಪ್ ಗುಂಪು ರಚಿಸಿ, ತಕ್ಷಣವೇ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಬೆಳೆಸಿ, ಧೈರ್ಯ ಹೇಳಿತು. ನಿರಂತರವಾಗಿ ಸಂಪರ್ಕ ಸಾಧಿಸಲಾಗಿತ್ತು. ಟೋಲ್ ಫ್ರೀ ಸಂಖ್ಯೆಯಲ್ಲಿ 12 ತಾಸಿನೊಳಗೆ ಪ್ರಾರಂಭಿಸಿತು. ಉಕ್ರೇನ್ ರಾಯಭಾರಿ ಕಚೇರಿಯೊಂದಿಗೆ ಐ.ಎ. ಎಸ್ ಅಧಿಕಾರಿ ಮನೋಜ್ ರಾಜನ್ ಅವರು ನಿರಂತರವಾಗಿ ಸಂಪರ್ಕದಲ್ಲಿದ್ದು, ಶ್ರಮವಹಿಸಿದ್ದು,ಈ ಕಾರ್ಯಾಚರಣೆ ಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು. ಉಕ್ರೇನ್ ಮತ್ತು ಪೊಲಾಂಡ್ ಅಧಿಕಾರಿಗಳಿಗೂ ಧನ್ಯವಾದಗಳನ್ನು ತಿಳಿಸಿದರು. ನವೀನ್ ನನ್ನು ಜೀವಂತವಾಗಿ ತರಲಾಗಲಿಲ್ಲ ಎಂಬ ದುಃಖ ಸದಾ ಇರುತ್ತದೆ. ಈಗ ಅವರ ಕುಟುಂಬದವರಿಗೆ ನೆರವು ನೀಡಲಾಗುವುದು. ಅವರೊಂದಿಗೆ ನಾವು ಇದ್ದೇವೆ. ಇಂಥ ಘಟನೆಗಳು ಮರುಕಳಿಸದಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡಲು ಸಾಧ್ಯ. ಅವನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದರು.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now