ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕಾವೇರಿ ನೀರು ಹಂಚಿಕೆ ವಿವಾದ ಕಾವು ಪಡೆದುಕೊಂಡಿದ್ದು, ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ನಿರ್ದೇಶನದ ವಿರುದ್ಧ ಕನ್ನಡಪರ ಸಂಘಟನೆಗಳು ಸಮರ ಸಾರಿವೆ. ಪ್ರತಿಭಟನೆಯ ಭಾಗವಾಗಿ ಆಗಸ್ಟ್ 13ರಂದು ರಾಜ್ಯಾದ್ಯಂತ ಪೂರ್ಣ ಪ್ರಮಾಣದ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದೆ.
ನಗರದ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ನಡೆದ ವಿವಿಧ ಕನ್ನಡಪರ ಒಕ್ಕೂಟಗಳ ಸಭೆಯ ನಂತರ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಆಗಸ್ಟ್ 13ರ ಗುರುವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ 'ಅಖಂಡ ಕರ್ನಾಟಕ ಬಂದ್' ನಡೆಯಲಿದೆ ಎಂದು ಪ್ರಕಟಿಸಿದರು. ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆಗಳಿಲ್ಲದ ದಿನಾಂಕ ನೋಡಿ ಈ ನಿರ್ಧಾರ ತಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ನೇರ ಎಚ್ಚರಿಕೆ ರವಾನಿಸಿದ ಅವರು, ಕಾವೇರಿ ವಿಚಾರದಲ್ಲಿ ನಾಟಕೀಯ ಸಭೆಗಳನ್ನು ನಡೆಸುವುದು ಸರಿ ಅಲ್ಲ ಎಂದರು. ಸದಾ ಸರ್ವಪಕ್ಷ ಸಭೆಗಳನ್ನು ಕರೆದು ಕಾಲಹರಣ ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಈ ಬಾರಿ ಗಟ್ಟಿಯಾದ ನಿರ್ಧಾರ ತಳೆಯಬೇಕು ಎಂದು ಒತ್ತಾಯಿಸಿದ ಅವರು, ಸ್ಥಳೀಯರಿಗೆ ಉದ್ಯೋಗ ಹಾಗೂ ಕನ್ನಡ ಶಾಲೆಯ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಬಂದ್ ವೇಳಾಪಟ್ಟಿ: ಸಾರ್ವಜನಿಕ ಸೇವೆಗಳ ಸ್ಥಿತಿಗತಿ
ಯಾವುದಕ್ಕೆ ವಿನಾಯಿತಿ?
ಆಸ್ಪತ್ರೆ, ವೈದ್ಯಕೀಯ ಸೇವೆಗಳು, ಪೆಟ್ರೋಲ್ ಬಂಕ್, ಬ್ಯಾಂಕಿಂಗ್ ವ್ಯವಸ್ಥೆ, ಸರ್ಕಾರಿ ಕಚೇರಿಗಳು ಮತ್ತು ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿವೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸಂಘಟನೆಗಳು ತಿಳಿಸಿವೆ.
ಯಾವುದರ ಮೇಲೆ ಪ್ರಭಾವ?
ಕನ್ನಡಪರ ಸಂಘಟನೆಗಳ ಈ ಹೋರಾಟಕ್ಕೆ ಹಲವು ಸಂಘಗಳು ನೈತಿಕ ಬೆಂಬಲ ಸೂಚಿಸಿರುವುದರಿಂದ ಆಟೋ, ಟ್ಯಾಕ್ಸಿ ಸಂಚಾರ, ಹೋಟೆಲ್, ಮದ್ಯ ಮಾರಾಟ, ಬೀದಿ ಬದಿ ವ್ಯಾಪಾರ ಹಾಗೂ ಸಣ್ಣಪುಟ್ಟ ಅಂಗಡಿ ಮುಂಗಟ್ಟುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ಕರ್ನಾಟಕ ಬಂದ್ ದಿನ ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ
ಏನಿರುತ್ತೆ?
ಆಸ್ಪತ್ರೆ , ಪೆಟ್ರೋಲ್ ಬಂಕ್, ಬ್ಯಾಂಕ್, ಸಾರಿಗೆ, ಮೆಡಿಕಲ್ ಹಾಗೂ ಸರ್ಕಾರಿ ಕಚೇರಿ ಬಂದ್ ಆಗುವುದಿಲ್ಲ. ಮೆಟ್ರೋ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರು ಆತಂಕ ಪಡಬೇಕಾದ ಅಗತ್ಯ ಇಲ್ಲ.
ಬಂದ್ ದಿನ ಏನಿರಲ್ಲ
ಇನ್ನು ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟ ಬಂದ್‌ಗೆ ಹಲವು ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿದೆ. ಈ ನಿಟ್ಟಿನಲ್ಲಿ ಯಾವುದೇ ವಾಹನ ಸಂಚಾರ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ. ಪರಿಣಾಮ ಆಟೋ ಸಂಚಾರ, ಟ್ಯಾಕ್ಸಿ ಸಂಚಾರ, ಬೀದಿ ಬದಿ ಅಂಗಡಿ, ಮದ್ಯ ಮಾರಾಟ, ಹೋಟೆಲ್ ಹಾಗೂ ಇತರ ಅಂಗಡಿ ಮುಂಗಟ್ಟುಗಳು ಬಂದ್ ಆಗುವ ಸಾಧ್ಯತೆ ಹೆಚ್ಚಾಗಿವೆ.

