ನವದೆಹಲಿ: 2020ರ ದೆಹಲಿ ಗಲಭೆಯ ಸಂದರ್ಭದಲ್ಲಿ ಗುಪ್ತಚರ ಇಲಾಖೆ (IB) ಅಧಿಕಾರಿ ಅಂಕಿತ್ ಶರ್ಮಾ ಅವರ ನೃಶಂಸ ಕೊಲೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಾರ್ಟಿಯ (AAP) ಮಾಜಿ ಕೌನ್ಸಿಲರ್ ತಾಪೀರ್ ಹುಸೇನ್ ಸೇರಿದಂತೆ ಐವರು ದೋಷಿಗಳಿಗೆ ದೆಹಲಿಯ ಕರ್ಕರ್ಡೂಮಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ ಮತ್ತು ತೀರ್ಪು:
ಫೆಬ್ರವರಿ 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಸಮಯದಲ್ಲಿ ಐಬಿ ಅಧಿಕಾರಿಯಾಗಿದ್ದ ಅಂಕಿತ್ ಶರ್ಮಾ ಅವರ ದೇಹವು ಚಾಂದ್ ಬಾಗ್ ಬಳಿಯ ಚರಂಡಿಯಲ್ಲಿ 51ಕ್ಕೂ ಹೆಚ್ಚು ತೀವ್ರ ಗಾಯಗಳೊಂದಿಗೆ ಪತ್ತೆಯಾಗಿತ್ತು.ಈ ಘಟನೆ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ನ್ಯಾಯಾಲಯವು ಜುಲೈ 13 ರಂದು ತಾಹಿರ್ ಹುಸೇನ್, ಜಾವೇದ್, ಅನಾಸ್, ನಾಜಿಮ್ ಮತ್ತು ಕಾಶಿಮ್ ಅವರನ್ನು ಕೊಲೆ, ಗಲಭೆ ಸೃಷ್ಟಿ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತಂದಿದ್ದಕ್ಕಾಗಿ ದೋಷಿ ಎಂದು ತೀರ್ಪು ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ದೋಷಿಗಳಿಗೆ ಗರಿಷ್ಠ ಶಿಕ್ಷೆಯಾಗಿ ಮರಣದಂಡನೆ ನೀಡಬೇಕೆಂದು ಮನವಿ ಮಾಡಿತ್ತು. ಆದರೆ, ನ್ಯಾಯಾಲಯವು ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿ ಇದೀಗ ದೋಷಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಆರೋಪ:
ತನ್ನ ಕಚೇರಿ ಹಾಗೂ ಮನೆಯ ಮಹಡಿಯಿಂದ ಗಲಭೆಕೋರರಿಗೆ ಕಲ್ಲು ತೂರಾಟ ನಡೆಸಲು, ಪೆಟ್ರೋಲ್ ಬಾಂಬ್ ಎಸೆಯಲು ಪ್ರಚೋದನೆ ನೀಡಿದ್ದಲ್ಲದೆ, ಹಿಂಸಾಚಾರಕ್ಕೆ ತಾಹಿರ್ ಹುಸೇನ್ ಸಹಕರಿಸಿದ್ದರು ಎಂಬುದು ತನಿಖೆಯಲ್ಲಿ ಸಾಬೀತಾಗಿತ್ತು. ಘಟನೆಯ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿಯು ತಾಹಿರ್ ಹುಸೇನ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿತ್ತು.
ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಆರು ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಸುದೀರ್ಘ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಬಳಿಕ ಸಿಕ್ಕಿರುವ ತೀರ್ಪನ್ನು ಅಂಕಿತ್ ಶರ್ಮಾ ಅವರ ಕುಟುಂಬ ಹಾಗೂ ಸಾರ್ವಜನಿಕರು ಸ್ವಾಗತಿಸಿದ್ದಾರೆ

