ಬೆಂಗಳೂರು: ಅಮೆರಿಕ ಪ್ರವಾಸದಿಂದ ವಾಪಸ್ ಬಂದ ತಕ್ಷಣ ದೇಶದಲ್ಲೇ ಭಾರೀ ಸಂಚಲನ ಸೃಷ್ಟಿಸುವ ಹಾಗೂ ಅಲ್ಲೋಲ ಕಲ್ಲೋಲ ಉಂಟುಮಾಡುವ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಾದ 'ಜೆಪಿ ಭವನ'ದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಕ್ಕ ಸಮ್ಮೇಳನ'ದ ಹಿನ್ನೆಲೆಯಲ್ಲಿ ತಾವು ಅಮೆರಿಕಗೆ ತೆರಳುತ್ತಿದ್ದು, ಹತ್ತು ದಿನಗಳ ನಂತರ ಹಿಂತಿರುಗಲಿದ್ದೇನೆ.
ಬಂದ ಬಳಿಕ ದಿನಕ್ಕೊಂದು ಬಾಂಬ್ ಸಿಡಿಸಿ, ಸತ್ಯಾಸತ್ಯತೆಗಳನ್ನು ಜನರ ಮುಂದಿಡುತ್ತೇನೆ. ಆಗ "ಹೆಚ್.ಡಿ. ಕುಮಾರಸ್ವಾಮಿ ಎಂದರೆ ಏನು" ಎಂಬುದು ಪ್ರತಿಯೊಬ್ಬರಿಗೂ ಗೊತ್ತಾಗಲಿದೆ ಎಂದು ಸವಾಲು ಎಸೆದಿದ್ದಾರೆ.
ಕೆಪಿಎಸ್‌ಸಿ ಅಕ್ರಮ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ: ಇದೇ ವೇಳೆ ಕರ್ನಾಟಕ ಲೋಕಸೇವಾ ಆಯೋಗ (KPSC) ಅಕ್ರಮದ ಕುರಿತು ಪ್ರಸ್ತಾಪಿಸಿದ ಕುಮಾರಸ್ವಾಮಿ, ಈ ಹಿಂದೆ ಸದನದಲ್ಲಿ ಮುಖ್ಯಮಂತ್ರಿಗಳು ನೀಡಿದ್ದ ಉತ್ತರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದರು. "ಅರ್ಹ ಅಭ್ಯರ್ಥಿಗಳಿಗೆ ಆರ್ಡರ್ ಕಾಪಿ ಕೊಡಬೇಡಿ ಎಂದು ಕೆಪಿಎಸ್‌ಸಿ ಕಾರ್ಯದರ್ಶಿಯೇ ಹೇಳಿದ್ದರು. ಆದಾಗ್ಯೂ ಸರ್ಕಾರ ಈ ವಿಚಾರದಲ್ಲಿ ಯಾವುದೇ ಮೇಲ್ಮನವಿ (ಅಪೀಲು) ಸಲ್ಲಿಸಿಲ್ಲ. ನೀವು ಯಾರನ್ನು ಕಾಪಾಡಲು ಮುಂದಾಗುತ್ತಿದ್ದೀರಿ? OMR ಶೀಟ್ ತಿದ್ದಿ ಪರೀಕ್ಷೆ ಪಾಸ್ ಆಗಿರುವ ಅಕ್ರಮ ಅಭ್ಯರ್ಥಿಗಳಿಗೆ ರಕ್ಷಣೆ ನೀಡುತ್ತಿದ್ದೀರಾ?" ಎಂದು ರಾಜ್ಯ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದರು.
ಆರ್‌ಎಸ್‌ಎಸ್ ಟೀಕಿಸುವ ಮೊದಲು ಉತ್ತರ ನೀಡಿ: ಕೆಪಿಎಸ್‌ಸಿ ಸಂಸ್ಥೆ ಇಂದು ಬೀದಿಯಲ್ಲಿ ಹರಾಜಿಗೆ ಬಂದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಹೆಚ್‌ಡಿಕೆ, ಆಡಳಿತ ಪಕ್ಷವು ಆರ್‌ಎಸ್‌ಎಸ್ (RSS) ಬಗ್ಗೆ ಟೀಕೆ ಮಾಡುವ ಮೊದಲು ಸಂಸ್ಥೆಯಲ್ಲಿ ನಡೆದಿರುವ ಸಾಲು ಸಾಲು ಅಕ್ರಮಗಳಿಗೆ ಸಾರ್ವಜನಿಕರಿಗೆ ಉತ್ತರಿಸಲಿ ಎಂದು ಟಾಂಗ್ ನೀಡಿದರು. ಈ ಸಂಸ್ಥೆಯನ್ನು ಪರಿಶುದ್ಧಗೊಳಿಸುವ ಉದ್ದೇಶದಿಂದಲೇ ಹೊಸ ಅಧ್ಯಕ್ಷರನ್ನು ತರಲಾಗಿತ್ತು. ಸಂಸ್ಥೆಯ ಬಗ್ಗೆ ಇಂದು ಸಾಮಾನ್ಯ ಜನರಲ್ಲಿ ಅಸಹ್ಯಕರ ಭಾವನೆ ಮೂಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಅವಧಿಯಲ್ಲಿ ಕಾನೂನುಬಾಹಿರ ಕೆಲಸ ಮಾಡಿಲ್ಲ: ತಮ್ಮ ಆಡಳಿತಾವಧಿಯನ್ನು ನೆನಪಿಸಿಕೊಂಡ ಕುಮಾರಸ್ವಾಮಿ, "ನಾನು ಕಡಿಮೆ ಅವಧಿಗೆ ಮುಖ್ಯಮಂತ್ರಿಯಾಗಿದ್ದಿರಬಹುದು, ಆದರೆ ಎಂದಿಗೂ ಕಾನೂನುಬಾಹಿರವಾಗಿ ಯಾರಿಗೂ ಯಾವುದೇ ಸೂಚನೆಗಳನ್ನು ನೀಡಿರಲಿಲ್ಲ. ಅಕ್ರಮ ಎಸಗಿದವರಿಗೆ ಕಾನೂನು ಮೀರಿ ರಕ್ಷಣೆ ಕೊಡಿ ಎಂದು ನಾನು ಎಲ್ಲೂ ಹೇಳಿಲ್ಲ. ನಾನು ಸಿಎಂ ಆಗಿದ್ದಾಗ ದಲಿತ ಸಮುದಾಯದ ನಾಯಕರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮಾಡಿದ್ದೆನೇ ಹೊರತು, ನನ್ನ ಸಂಬಂಧಿಕರನ್ನಾಗಲಿ ಅಥವಾ ಆಪ್ತರನ್ನಾಗಲಿ ಆ ಹುದ್ದೆಗೆ ತಂದು ಕೂರಿಸಿರಲಿಲ್ಲ" ಎಂದು ಸ್ಪಷ್ಟಪಡಿಸಿದರು.
ಪಲಾಯನ ಮಾಡದೆ ಒಂಟಿಯಾಗಿಯೇ ಎದುರಿಸುತ್ತೇನೆ: ಗೃಹ ಸಚಿವರು ಅಧಿಕಾರಕ್ಕೆ ಬರುವ ಮುನ್ನ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದರು, ಆದರೆ ಈಗ ಏನು ಮಾಡಿದ್ದಾರೆ? ಪ್ರಶ್ನೆಪತ್ರಿಕೆ ಸೋರಿಕೆಯಾದಾಗಲೆಲ್ಲಾ ನಾನು ಪ್ರಾಮಾಣಿಕವಾಗಿ ಧ್ವನಿ ಎತ್ತಿದ್ದೇನೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ತಮ್ಮ ವಿರುದ್ಧ ಬರುವ ಯಾವುದೇ ಟೀಕೆ-ಟಿಪ್ಪಣಿಗಳಿಗೆ ಸಮರ್ಥವಾಗಿ ಉತ್ತರಿಸುವ ಧೈರ್ಯ ನನಗಿದೆ. ಬೇರೆಯವರಂತೆ ರಾಜಕೀಯ ಪಲಾಯನ ಮಾಡುವ ಅಭ್ಯಾಸ ನನಗಿಲ್ಲ. ಏನೇ ಪರಿಸ್ಥಿತಿ ಬಂದರೂ ಒಬ್ಬನೇ ನಿಂತು ಎದುರಿಸುತ್ತೇನೆ ಹಾಗೂ ನನಗಾಗಿ ಬೆಂಬಲಿಸಿ ಹೇಳಿಕೆ ಕೊಡಿ ಎಂದು ನಾನು ಯಾರ ಬಳಿಯೂ ಕೇಳಿಕೊಳ್ಳುವುದಿಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ಪ್ರತ್ಯುತ್ತರ ನೀಡಿದ್ದಾರೆ.

