ಚಂಡೀಗಢ: ಪಂಜಾಬ್‌ನಲ್ಲಿ ಇತ್ತೀಚೆಗೆ ಪತ್ತೆಯಾದ ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಉಗ್ರ ಜಾಲವು ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಬೃಹತ್ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿತ್ತು ಎಂಬ ಆಘಾತಕಾರಿ ಅಂಶ ಪೋಲಿಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮಂಗಳವಾರ ಪಂಜಾಬ್ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಅಪ್ರಾಪ್ತರು ಸೇರಿದಂತೆ ಒಟ್ಟು 9 ಮಂದಿ ಶಂಕಿತರನ್ನು ಬಂಧಿಸಿದ್ದು, ಅವರ ವಿಚಾರಣೆ ವೇಳೆ ಈ ಭಯಾನಕ ಯೋಜನೆಯ ಸತ್ಯಾಸತ್ಯತೆ ಹೊರಬಿದ್ದಿದೆ.
ಬಂಧಿತ ಆರೋಪಿಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ, ಅವರು ಜಂತರ್‌ಮಂತರ್‌ನಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು ಎಂಬುದು ತಿಳಿದುಬಂದಿದೆ. ಈ ಪೈಕಿ ಒಂದು ಗುಂಪಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನಿಂದ ಹಣಕಾಸು ಹಾಗೂ ಅಗತ್ಯ ತಾಂತ್ರಿಕ ನೆರವು ಸಿಗುತ್ತಿತ್ತು. ಈ ಬೆಂಬಲದೊಂದಿಗೆ ಪೆಟ್ರೋಲ್ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳು ಮತ್ತು ಇತರ ಸೌಕರ್ಯಗಳನ್ನು ಜೋಡಿಸಿಕೊಂಡು ಆರೋಪಿಗಳು ಜಂತರ್‌ಮಂತರ್‌ಗೂ ತಲುಪಿದ್ದರು.
ಆದರೆ, ಸ್ಥಳದಲ್ಲಿದ್ದ ಬಿಗಿ ಪೊಲೀಸ್ ಭದ್ರತೆ ಮತ್ತು ಸೂಕ್ತ ಸಮಯ ಸಿಗದ ಕಾರಣ ಆರೋಪಿಗಳಿಗೆ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಸದ್ಯ ದಾಳಿಯ ಸಂಚನ್ನು ವಿಫಲಗೊಳಿಸಿರುವ ಪಂಜಾಬ್ ಪೊಲೀಸರು, ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ಈ ಜಾಲದ ಹಿಂದೆ ಇರುವ ಇತರ ಸೂತ್ರಧಾರರ ಪತ್ತೆಗೆ ಜಂಟಿ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

