ಭಾರತದ ಉದಯೋನ್ಮುಖ ಚೆಸ್ ತಾರೆ, ಚೆನ್ನೈ ಮೂಲದ ಗ್ರಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಅವರು ಸೇಂಟ್ ಲೂಯಿಸ್‌ನಲ್ಲಿ ನಡೆದ ಗ್ರಾಂಡ್ ಚೆಸ್ ಟೂರ್ ಫೈನಲ್ಸ್‌ನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುಆನಾ ವಿರುದ್ಧ ಭವ್ಯ ಪುನರಾಗಮನ ಮಾಡಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಗುರುವಾರ, ಆಗಸ್ಟ್ 27 ರಂದು ನಡೆದ ಅಂತಿಮ ಹೆಜ್ಜೆಯ ಪಂದ್ಯದಲ್ಲಿ ಅದ್ಭುತ ಸಾಧನೆ ತೋರಿದ ಅವರು, ತಮ್ಮ ಚೊಚ್ಚಲ ಗ್ರಾಂಡ್ ಚೆಸ್ ಟೂರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಸುಮಾರು 2 ಕೋಟಿ ರೂಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಐತಿಹಾಸಿಕ ವಿಜಯದೊಂದಿಗೆ ಪ್ರಜ್ಞಾನಂದ ಅವರು ಗ್ರಾಂಡ್ ಚೆಸ್ ಟೂರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೈನಲ್‌ನ ಅಂತಿಮ ದಿನದಾಟಕ್ಕೆ ಕಾಲಿಡುವಾಗ ಕರುಆನಾ 6 ಅಂಕಗಳ ಬೃಹತ್ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ತೀವ್ರ ಒತ್ತಡದ ನಡುವೆಯೂ ಅದ್ಭುತವಾಗಿ ಆಡಿದ ಪ್ರಜ್ಞಾನಂದ, ಎರಡೂ ರ್ಯಾಪಿಡ್ ಪಂದ್ಯಗಳನ್ನು ಗೆಲ್ಲುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ನಂತರ ನಡೆದ ಬ್ಲಿಟ್ಜ್ ವಿಭಾಗದಲ್ಲಿ ಕರುಆನಾ ಪ್ರಜ್ಞಾನಂದ ಅವರಿಗೆ ತಿರುಗೇಟು ನೀಡಲು ಪ್ರಯತ್ನಿಸಿದರೂ, ಕೊನೆಯಲ್ಲಿ 15-13 ಅಂತರದ ಒಟ್ಟು ಅಂಕಗಳಿಂದ ಭಾರತೀಯ ಆಟಗಾರ ಟ್ರೋಫಿಯನ್ನು ಎತ್ತಿಹಿಡಿದರು.
ಪಂದ್ಯದ ಆರಂಭಿಕ ಕ್ಲಾಸಿಕಲ್ ವಿಭಾಗದಲ್ಲಿ ಕರುಆನಾ 6-0 ಅಂತರದಿಂದ ಪ್ರಾಬಲ್ಯ ಸಾಧಿಸಿದ್ದರು. ಆದರೆ ಅಂತಿಮ ದಿನದಾಟದಲ್ಲಿ ಪ್ರಜ್ಞಾನಂದ ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ಪರವಾಗಿ ತಿರುಗಿಸಿಕೊಂಡರು. ಇನ್ನೊಂದೆಡೆ, ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ವೆಸ್ಲಿ ಸೋ ಅವರು ವಿನ್ಸೆಂಟ್ ಕೇಮರ್ ವಿರುದ್ಧ 18-12 ಅಂತರದ ಭರ್ಜರಿ ಗೆಲುವು ಸಾಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕರುಆನಾ ವಿರುದ್ಧ ಹಿನ್ನಡೆಯಿಂದ ಪುಟಿದೆದ್ದು ಪ್ರಜ್ಞಾನಂದ ಸಾಧಿಸಿದ ಈ ಗೆಲುವು ಭಾರತೀಯ ಚೆಸ್ ಇತಿಹಾಸದಲ್ಲಿ ಮತ್ತೊಂದು ಹೊಸ ಮೈಲಿಗಲ್ಲಾಗಿದೆ.

