ಬೆಂಗಳೂರು: ವಾಹನ ಓವರ್‌ಟೇಕ್ ಮಾಡಿದ ಕ್ಷುಲ್ಲಕ ಕಾರಣಕ್ಕೆ ಸಹಪಾಠಿ ವಿದ್ಯಾರ್ಥಿಯನ್ನು ಕಾರಿನಲ್ಲಿ ಅಪಹರಿಸಿ ಹಿಗ್ಗಾಮುಗ್ಗಾ ಥಳಿಸಿರುವ ಗಂಭೀರ ಆರೋಪ ಸ್ಯಾಂಡಲ್‌ವುಡ್ ನಟ 'ದುನಿಯಾ' ವಿಜಯ್ ಅವರ ಮಗನ ಮೇಲೆ ಕೇಳಿಬಂದಿದೆ. ಕಾಲೇಜು ಆವರಣದ ಮುಂಭಾಗದಲ್ಲೇ ಸಿನಿಮೀಯ ಮಾದರಿಯಲ್ಲಿ ನಡೆದ ಈ ಕೃತ್ಯ ರಾಜಧಾನಿಯಲ್ಲಿ ಭಾರಿ ಸಂಚಲನ ಮೂಡಿಸಿದೆ.
ಓವರ್‌ಟೇಕ್ ವಿಚಾರಕ್ಕೆ ಶುರುವಾಗಿದ್ದ ಜಗಳ
ರಾಜರಾಜೇಶ್ವರಿ ನಗರದಲ್ಲಿ ದುನಿಯಾ ವಿಜಯ್ ಪುತ್ರ ಹಾಗೂ ಆತನ ಸ್ನೇಹಿತರು ಜಿಪ್ಸಿ ವಾಹನದಲ್ಲಿ ತೆರಳುತ್ತಿದ್ದ ವೇಳೆ, ಆರ್.ವಿ. ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ತನ್ನ ಐ-20 ಕಾರಿನಲ್ಲಿ ಇವರ ವಾಹನವನ್ನು ಓವರ್‌ಟೇಕ್ ಮಾಡಿದ್ದನು. ಈ ಸಣ್ಣ ವಿಚಾರಕ್ಕೆ ರಸ್ತೆಯಲ್ಲೇ ಎರಡೂ ಕಡೆಯವರ ನಡುವೆ ತೀವ್ರ ವಾಗ್ವಾದ ನಡೆದಿತ್ತು.
ಕ್ಯಾಂಪಸ್ ಎದುರೇ ಅಪಹರಿಸಿ ಕಾರಿನಲ್ಲೇ ಹಲ್ಲೆ
ಹಳೆಯ ದ್ವೇಷವನ್ನು ತಲೆಯಲ್ಲಿಟ್ಟುಕೊಂಡಿದ್ದ ನಟನ ಪುತ್ರ ಮತ್ತು ಆತನ ಗ್ಯಾಂಗ್, ಮೈಸೂರು ರಸ್ತೆಯ ಆರ್‌ವಿ ಯೂನಿವರ್ಸಿಟಿ ಗೇಟ್ ಬಳಿ ನಿಂತಿದ್ದ ಅದೇ ವಿದ್ಯಾರ್ಥಿಯನ್ನು ಅಡ್ಡಗಟ್ಟಿದೆ. ಆತನನ್ನು ಬಲವಂತವಾಗಿ ಎಳೆದೊಯ್ದು ತಮ್ಮ ವಾಹನಕ್ಕೆ ತಳ್ಳಿ ಅಪಹರಿಸಿದ ದುಷ್ಕರ್ಮಿಗಳು, ಚಲಿಸುವ ಕಾರಿನಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ.
ಆಸ್ಪತ್ರೆಗೆ ದಾಖಲು, ಕೆಂಗೇರಿ ಪೊಲೀಸರ ತನಿಖೆ
ಹಲ್ಲೆಗೊಳಗಾದ ವಿದ್ಯಾರ್ಥಿ ಹಾಗೂ ದುನಿಯಾ ವಿಜಯ್ ಮಗ ಇಬ್ಬರೂ ಒಂದೇ ವಿವಿಯಲ್ಲಿ ಕಲಿಯುತ್ತಿರುವ ಸಹಪಾಠಿಗಳಾಗಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಕೆಂಗೇರಿ ಪೊಲೀಸ್ ಠಾಣೆಗೆ ಸಂತ್ರಸ್ತ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಸಾಕ್ಷ್ಯಗಳನ್ನು ಕಲೆಹಾಕಿ ತನಿಖೆ ತೀವ್ರಗೊಳಿಸಿದ್ದಾರೆ.
ಇತ್ತೀಚೆಗಷ್ಟೇ ಪುತ್ರನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಿಸಲು ತಯಾರಿ ನಡೆಸುತ್ತಿದ್ದ ನಟ ದುನಿಯಾ ವಿಜಯ್ ಅವರಿಗೆ, ಸಿನಿಮಾ ರಂಗ ಪ್ರವೇಶಿಸುವ ಮೊದಲೇ ಮಗ ಅಪಹರಣ ಮತ್ತು ಹಲ್ಲೆ ಕೇಸ್‌ನಲ್ಲಿ ಸಿಲುಕಿರುವುದು ಭಾರಿ ಮುಜುಗರ ತಂದಿಟ್ಟಿದೆ.

