ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಸರಣಿ ಭೂಕುಸಿತದಿಂದಾಗಿ ದೊಡ್ಡ ಮಟ್ಟದ ಜಲಪ್ರಳಯವೇ ಸೃಷ್ಟಿಯಾಗಿದ್ದು, ಪ್ರವಾಸಿಗರು ಸೇರಿದಂತೆ ಮೃತರ ಸಂಖ್ಯೆ 469ಕ್ಕೆ ಏರಿಕೆಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಕೆಸರಿನ ಅಡಿಯಲ್ಲಿ ಶವಗಳ ರಾಶಿ ಬಿದ್ದಿದೆ.
ಎಲ್ಲೆಂದರಲ್ಲಿ ದುರ್ನಾತ ಬೀರುತ್ತಿದ್ದು, ಕಣ್ಮರೆಯಾಗಿರುವ ಜನರನ್ನು ಪತ್ತೆಹಚ್ಚುವುದು ರಕ್ಷಣಾ ಪಡೆಯ ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ದುರಂತದಲ್ಲಿ ಸುಮಾರು 1,500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಅವರಲ್ಲಿ 288 ಭಾರತೀಯರು ಸೇರಿದ್ದಾರೆ. ನಾಪತ್ತೆಯಾದವರಲ್ಲಿ ಹೆಚ್ಚಿನವರು ವಿದೇಶಿ ಪ್ರವಾಸಿಗರಾಗಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಆದಾಗ್ಯೂ, ನಾಪತ್ತೆಯಾಗಿದ್ದಾರೆ ಎನ್ನಲಾದ 288 ಭಾರತೀಯರಲ್ಲಿ ಹಲವು ಕನ್ನಡಿಗರು ಸಹ ಸೇರಿದ್ದು, ಸದ್ಯ ದೊರೆತ ಮಾಹಿತಿಯಂತೆ ಕನ್ನಡಿಗರು ಸೇರಿದಂತೆ ಭಾರತೀಯರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಸಂಕಷ್ಟದಲ್ಲಿರುವವರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಇನ್ನು ನೆರೆ ಸಂತ್ರಸ್ತರ ನೆರವಿಗಾಗಿ ಭಾರತ ಸರ್ಕಾರವು ತಕ್ಷಣವೇ ಸ್ಪಂದಿಸಿದ್ದು, ನೇಪಾಳಕ್ಕೆ ಸಹಾಯ ಹಸ್ತ ಚಾಚಿದೆ. ಭಾರತದಿಂದ ಬಟ್ಟೆ, ಅತ್ಯಗತ್ಯ ಔಷಧಗಳು, ಟೂತ್‌ಬ್ರಷ್, ಟೂತ್‌ಪೇಸ್ಟ್ ಹಾಗೂ ಸಾಬೂನು ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಟನ್ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿ ನೇಪಾಳಕ್ಕೆ ಕಳುಹಿಸಿಕೊಡಲಾಗಿದೆ. ಸಂಕಷ್ಟದ ಸಮಯದಲ್ಲಿ ನೆರೆರಾಷ್ಟ್ರಕ್ಕೆ ಭಾರತ ಸಕಾಲಿಕ ನೆರವು ನೀಡುವ ಮೂಲಕ ಮನುಷ್ಯತ್ವ ಮೆರೆದಿದೆ.

