Dailyhunt Logo
  • Light mode
    Follow system
    Dark mode
    • Play Story
    • App Story
BREAKING : ರಾಜ್ಯದಲ್ಲಿ ಹೀನ ಕೃತ್ಯ : ಚಿಕ್ಕಮಗಳೂರಲ್ಲಿ 3 ಹಸುಗಳ ಗೋವುಗಳ ಕಾಲು, ಬಾಲ, ತೊಡೆ ಕಡಿದು ಕ್ರೌರ್ಯ!

BREAKING : ರಾಜ್ಯದಲ್ಲಿ ಹೀನ ಕೃತ್ಯ : ಚಿಕ್ಕಮಗಳೂರಲ್ಲಿ 3 ಹಸುಗಳ ಗೋವುಗಳ ಕಾಲು, ಬಾಲ, ತೊಡೆ ಕಡಿದು ಕ್ರೌರ್ಯ!

Kannada News Now 1 week ago

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಂದುವಳ್ಳಿ ಗ್ರಾಮದಲ್ಲಿ ಹಸುಗಳ ಕಾಲು, ಬಾಲ ಹಾಗೂ ತೊಡೆ ಭಾಗಕ್ಕೆ ಗಂಭೀರ ಗಾಯಗಳಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೀಡಾಡಿ ಹಸುಗಳ ಮೇಲೆ ಕಿಡಿಗೇಡಿಗಳು ಕತ್ತಿಯಿಂದ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಘಟನೆ ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಚಂದುವಳ್ಳಿ ಗ್ರಾಮದಲ್ಲಿ ಸುಮಾರು 100ಕ್ಕೂ ಹೆಚ್ಚು ಬೀಡಾಡಿ ಹಸುಗಳಿದ್ದು, ಇವುಗಳಲ್ಲಿ ಮೂರು ಹಸುಗಳ ಹಿಂಭಾಗದ ಕಾಲು, ತೊಡೆ ಹಾಗೂ ಬಾಲದ ಭಾಗದಲ್ಲಿ ಕತ್ತರಿಸಿದಂತಹ ಆಳವಾದ ಗಾಯಗಳಾಗಿವೆ. ಮಳೆಯ ಕಾರಣದಿಂದಾಗಿ ಹಸುಗಳ ಗಾಯಗಳು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ನೀರಿನಲ್ಲಿ ನೆನೆದು ರಕ್ತಸ್ರಾವ ಹೆಚ್ಚಾಗುತ್ತಿದೆ. ಗಾಯಾಳು ಹಸುಗಳು ಅನುಭವಿಸುತ್ತಿರುವ ಯಾತನೆಯನ್ನು ಕಂಡು ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದ್ದಾರೆ.

ದನಗಳ್ಳರು ಬೀಡಾಡಿ ದನಗಳನ್ನು ಸುಲಭವಾಗಿ ಕದಿಯುವ ಉದ್ದೇಶದಿಂದಲೇ ಅವುಗಳು ಓಡದಂತೆ ಕಾಲು ಮತ್ತು ಬಾಲ ಕತ್ತರಿಸಿ ಈ ರೀತಿ ಗಾಯಗೊಳಿಸಿದ್ದಾರೆ ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ. ಹಸುಗಳ ಮೇಲೆ ಇಂತಹ ಕ್ರೌರ್ಯ ಎಸಗಿರುವ ಕಿಡಿಗೇಡಿಗಳನ್ನು ತಕ್ಷಣವೇ ಪತ್ತೆ ಹಚ್ಚಿ, ಬಂಧಿಸಬೇಕು ಎಂದು ಗ್ರಾಮಸ್ಥರು ಪೊಲೀಸರನ್ನು ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಮೂಡಿಗೆರೆ ಸರ್ಕಲ್ ಇನ್ಸ್‌ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಗಾಯಗೊಂಡಿರುವ ಹಸುಗಳಿಗೆ ತಕ್ಷಣದ ವೈದ್ಯಕೀಯ ನೆರವು ನೀಡಲು ಪಶುಪಾಲನಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಯಂಬುಲೆನ್ಸ್‌ನೊಂದಿಗೆ ಧಾವಿಸಿದ್ದಾರೆ. ಆದರೆ, ಇವು ಬೀಡಾಡಿ ಹಸುಗಳಾಗಿದ್ದರಿಂದ ಮತ್ತು ಮನುಷ್ಯರನ್ನು ಕಂಡು ಹೆದರಿ ಓಡುತ್ತಿದ್ದರಿಂದ, ಅವುಗಳನ್ನು ಹಿಡಿದು ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ, ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜಿತೇಂದ್ರ ಕುಮಾರ್ ದಯಾಮ ಅವರು ಸ್ಪಷ್ಟನೆ ನೀಡಿದ್ದಾರೆ. "ಸುಮಾರು ಒಂದು ವಾರದ ಹಿಂದೆ ಈ ಘಟನೆ ನಡೆದಿದೆ. ಚಂದುವಳ್ಳಿಯಲ್ಲಿರುವ ಬೀಡಾಡಿ ಹಸುಗಳು ಸಾಮಾನ್ಯವಾಗಿ ಕಾಫಿ ತೋಟಗಳಲ್ಲಿ ಅಲೆಯುತ್ತಿರುತ್ತವೆ. ಪ್ರಸ್ತುತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅವು ಒಣಗಿದ ಜಾಗವನ್ನು ಹುಡುಕಿಕೊಂಡು ಬರುವಾಗ ಈ ಅವಘಡ ಸಂಭವಿಸಿದೆ" ಎಂದು ಅವರು ತಿಳಿಸಿದ್ದಾರೆ.

ಹಸುಗಳು ತೋಟದ ತಂತಿ ಬೇಲಿಗಳನ್ನು ದಾಟುವಾಗ ಹಾಗೂ ಪರಸ್ಪರ ಕಾದಾಡುವಾಗ ಈ ರೀತಿಯ ಗಾಯಗಳಾಗಿರಬಹುದು. ಮನುಷ್ಯರು ಯಾವುದೇ ಮಾರಕಾಸ್ತ್ರ ಅಥವಾ ಆಯುಧಗಳನ್ನು ಬಳಸಿ ಹಸುಗಳನ್ನು ಗಾಯಗೊಳಿಸಿರುವ ಬಗ್ಗೆ ಸ್ಥಳದಲ್ಲಿ ಯಾವುದೇ ಕುರುಹುಗಳು ಕಂಡುಬಂದಿಲ್ಲ ಎಂದು ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರು ಗ್ರಾಮಸ್ಥರ ಆರೋಪವನ್ನು ತಳ್ಳಿಹಾಕಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now