ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿಯಾಗಿ ಪರಿಗಣಿಸಲ್ಪಟ್ಟಿರುವ 14ನೇ ಆರೋಪಿ (A14) ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ನಗರದ 59ನೇ ಸಿಸಿಹೆಚ್ ಕೋರ್ಟ್ ಮುಂದೂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ಆದೇಶ ಇನ್ನೂ ಹೊರಬರಬೇಕಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲು ವಿಶೇಷ ಸರ್ಕಾರಿ ಅಭಿಯೋಜಕರು ಮನವಿ ಮಾಡಿದರು.
ಪ್ರಕರಣದ ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನಕುಮಾರ್ ಅವರು ನ್ಯಾಯಾಲಯಕ್ಕೆ ಸುದೀರ್ಘ ಮನವಿ ಸಲ್ಲಿಸಿದರು. ಹೈಕೋರ್ಟ್‌ನಲ್ಲಿ ಪ್ರಕರಣದ ಕುರಿತ ಆದೇಶ ಬಾಕಿ ಇರುವುದರಿಂದ ಹೇಳಿಕೆ ದಾಖಲಿಸಲು ಹೆಚ್ಚಿನ ಕಾಲಾವಕಾಶದ ಅಗತ್ಯವಿದೆ ಎಂದು ತಿಳಿಸಿದ ಅವರು, ಪ್ರಕ್ರಿಯೆಯನ್ನು ಸೋಮವಾರಕ್ಕೆ ಮುಂದೂಡುವಂತೆ ಕೋರಿದರು. ಎಸ್‌ಪಿಪಿ ಅವರ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ಮುಂದಿನ ಪ್ರಕ್ರಿಯೆಯನ್ನು ಸೋಮವಾರಕ್ಕೆ ನಿಗದಿಪಡಿಸಿದರು.
ವಿಚಾರಣೆ ಹಿನ್ನೆಲೆಯಲ್ಲಿ ಇಂದು ಜೈಲು ಅಧಿಕಾರಿಗಳು ಆರೋಪಿ ಪ್ರದೋಷ್‌ನನ್ನು ಬಿಗಿ ಭದ್ರತೆಯಲ್ಲಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ನ್ಯಾಯಾಲಯದ ಮುಂದೆ ಬಂದ ಪ್ರದೋಷ್, ಕಾನೂನುಬದ್ಧವಾಗಿ ಪೂರ್ಣಗೊಳಿಸಬೇಕಿದ್ದ ಅಗತ್ಯ ಪ್ರಕ್ರಿಯೆಗಳನ್ನು ಮುಗಿಸಿ, ದಾಖಲೆಗಳಿಗೆ ಸಹಿ ಮಾಡಿ ಹೊರಬಂದರು. ವಿಚಾರಣೆ ಮುಂದೂಡಿಕೆಯಾಗುತ್ತಿದ್ದಂತೆ ಪೊಲೀಸರು ಆತನನ್ನು ಮರಳಿ ಪರಪ್ಪನ ಅಗ್ರಹಾರ ಕೇಂದ್ರ ಜೈಲಿಗೆ ಕರೆದೊಯ್ದರು.

