Dailyhunt Logo
  • Light mode
    Follow system
    Dark mode
    • Play Story
    • App Story
BREAKING: ವಿಧಾನ ಪರಿಷತ್ ಮತ ಮರು ಎಣಿಕೆ ಫಲಿತಾಂಶ ಹೈಕೋರ್ಟ್ ಪ್ರಕಟ: ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡಗೆ ಗೆಲುವು

BREAKING: ವಿಧಾನ ಪರಿಷತ್ ಮತ ಮರು ಎಣಿಕೆ ಫಲಿತಾಂಶ ಹೈಕೋರ್ಟ್ ಪ್ರಕಟ: ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡಗೆ ಗೆಲುವು

Kannada News Now 2 weeks ago

ಚಿಕ್ಕಮಗಳೂರು: ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿದ್ದ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಅವರ ಪರಿಷತ್ ಸದಸ್ಯತ್ವ ರದ್ದಾಗಿದ್ದು, ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರನ್ನು ನೂತನ ವಿಜೇತ ಅಭ್ಯರ್ಥಿ ಎಂದು ರಾಜ್ಯ ಹೈಕೋರ್ಟ್ ಅಧಿಕೃತವಾಗಿ ಘೋಷಿಸಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತೀರ್ಪು ಜಾರಿ:

ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮತ್ತು ನಿರ್ದೇಶನದಂತೆ ಕರ್ನಾಟಕ ಹೈಕೋರ್ಟ್ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಸುಪ್ರೀಂ ಕೋರ್ಟ್‌ಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದ ಮರುಮತಎಣಿಕೆ ವರದಿಯ ಆಧಾರದ ಮೇಲೆ, ಗಾಯತ್ರಿ ಶಾಂತೇಗೌಡ ಅವರು 9 ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂದು ಅಂತಿಮವಾಗಿ ಪ್ರಕಟಿಸಲಾಗಿದೆ. ಈ ತೀರ್ಪಿನ ಬೆನ್ನಲ್ಲೇ ಗಾಯತ್ರಿ ಶಾಂತೇಗೌಡ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಗೆಲುವನ್ನು ಖಚಿತಪಡಿಸಿದ್ದಾರೆ.

ಅನರ್ಹ ಮತಗಳೇ ಹಿನ್ನಡೆಗೆ ಕಾರಣವಾಗಿತ್ತು:

2021ರ ಡಿಸೆಂಬರ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ 1,188 ಮತಗಳನ್ನು ಪಡೆದಿದ್ದರೆ, ಗಾಯತ್ರಿ ಶಾಂತೇಗೌಡ 1,182 ಮತಗಳನ್ನು ಗಳಿಸಿ ಕೇವಲ 6 ಮತಗಳ ಅಂತರದಿಂದ ಪರಾಜಯಗೊಂಡಿದ್ದರು. ಆದರೆ, ಮತದಾನಕ್ಕೆ ಅರ್ಹತೆ ಹೊಂದಿರದ ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ಹಾಗೂ ಮೂಡಿಗೆರೆ ಪಟ್ಟಣ ಪಂಚಾಯತಿಗಳ ನಾಮನಿರ್ದೇಶಿತ ಸದಸ್ಯರು ಚಲಾಯಿಸಿದ್ದ 12 ಅನರ್ಹ ಮತಗಳು ಎಂ.ಕೆ. ಪ್ರಾಣೇಶ್ ಅವರ ಗೆಲುವಿಗೆ ನೆರವಾಗಿದ್ದವು.

ಸುದೀರ್ಘ ಕಾನೂನು ಹೋರಾಟಕ್ಕೆ ಸಿಕ್ಕ ಜಯ:

ಈ ಅನರ್ಹ ಮತಗಳನ್ನು ಪ್ರಶ್ನಿಸಿ ಗಾಯತ್ರಿ ಶಾಂತೇಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ಕಾನೂನು ಸಮರದ ಬಳಿಕ, ಅನರ್ಹ 12 ಮತಗಳನ್ನು ಬದಿಗಿಟ್ಟು ಲೆಕ್ಕಹಾಕಿದಾಗ ಗಾಯತ್ರಿ ಶಾಂತೇಗೌಡ ಅವರು 9 ಮತಗಳ ನಿವ್ವಳ ಅಂತರದಿಂದ ಜಯ ಸಾಧಿಸಿರುವುದು ಸ್ಪಷ್ಟವಾಗಿದೆ. ಚುನಾವಣೆ ನಡೆದು ಈಗಾಗಲೇ ನಾಲ್ಕುವರೆ ವರ್ಷಗಳು ಕಳೆದಿವೆ. ಮರುಮತ ಎಣಿಕೆ ಪ್ರಕ್ರಿಯೆ ಮುಗಿದು ವರ್ಷ ಕಳೆದಿದ್ದರೂ, ಕಾನೂನು ಪ್ರಕ್ರಿಯೆಗಳ ಬಳಿಕ ಇದೀಗ ಅಂತಿಮ ತೀರ್ಪು ಬಂದಿದ್ದು, ಗಾಯತ್ರಿ ಶಾಂತೇಗೌಡ ಅವರಿಗೆ ಇನ್ನುಳಿದ ಒಂದೂವರೆ ವರ್ಷಗಳ ಅವಧಿಗೆ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಂತಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now