ಸ್ಯಾನ್ ಫ್ರಾನ್ಸಿಸ್ಕೋ: ಸಾಮರ್ಥ್ಯಶಾಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಪ್ರವೇಶದಿಂದಾಗಿ ಒಬ್ಬ ವ್ಯಕ್ತಿ ಏನೆಲ್ಲಾ ಸಾಧಿಸಬಹುದು ಎಂಬ ವ್ಯಾಪ್ತಿ ಸಂಪೂರ್ಣವಾಗಿ ಬದಲಾಗಿದ್ದು, ಕಂಪ್ಯೂಟರ್ ಸೈನ್ಸ್ ಕಲಿಯುವ ವಿದ್ಯಾರ್ಥಿಗಳು ಸಮಸ್ಯೆಗಳನ್ನು ನೋಡುವ ಹಾಗೂ ಆಲೋಚಿಸುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕಿದೆ ಎಂದು ಓಪನ್‌ಎಐ (OpenAI) ಸಿಇಒ ಸ್ಯಾಮ್ ಆಲ್ಟ್‌ಮನ್ ಹೇಳಿದ್ದಾರೆ.
ಇತ್ತೀಚೆಗೆ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, "ಇಂದು ನೀವು ಹೊಂದಬಹುದಾದ ಮಹತ್ವಾಕಾಂಕ್ಷೆಯ ಮಟ್ಟ, ಕೆಲಸ ಮಾಡುವ ವೇಗ ಮತ್ತು ಏಕಕಾಲದಲ್ಲಿ ನಿಭಾಯಿಸಬಹುದಾದ ಕಾರ್ಯಗಳ ಪ್ರಮಾಣವು ಎಐ ಯುಗದಲ್ಲಿ ಸಂಪೂರ್ಣ ಭಿನ್ನವಾಗಿದೆ" ಎಂದು ಪ್ರತಿಪಾದಿಸಿದರು.
ಶಿಕ್ಷಕರು ನೀಡುವ ಸಿದ್ಧ ಸಮಸ್ಯೆಗಳ ಬೆನ್ನುಬೀಳಬೇಡಿ
ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಹರಿಸಲು ನೀಡುವ ನಿರ್ದಿಷ್ಟ ಸಮಸ್ಯೆಗಳು ಅಥವಾ ಸ್ಟಾರ್ಟಪ್ ಐಡಿಯಾಗಳ ಬಗ್ಗೆ ಆಲ್ಟ್‌ಮನ್ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಸಮಸ್ಯೆ ಅಥವಾ ಆಲೋಚನೆ ಶಿಕ್ಷಕರಿಗೆ ಹೊಳೆಯುವಷ್ಟು ಸರಳವಾಗಿದ್ದರೆ, ಅದು ಈಗಾಗಲೇ ಹಲವು ಜನರಿಗೆ ತಿಳಿದಿರುತ್ತದೆ. ಆಟೋಮೇಟೆಡ್ ಕೋಡಿಂಗ್ ಹಾಗೂ ಎಐ ವ್ಯವಸ್ಥೆಗಳು ಬರುವ ಮುನ್ನ ಅಸಾಧ್ಯವೆನಿಸಿದ್ದ ಮತ್ತು ಕೆಲವೇ ಕಂಪನಿಗಳು ಮಾತ್ರ ಪ್ರಯತ್ನಿಸುತ್ತಿರುವ ಹೊಸ ಅವಕಾಶಗಳನ್ನು ಹುಡುಕುವುದರಲ್ಲಿ ನೈಜ ಸಾಮರ್ಥ್ಯ ಅಡಗಿದೆ ಎಂದರು. "ನಾವು ಓಪನ್‌ಎಐ ಆರಂಭಿಸಿದಾಗ ಜಗತ್ತಿನಲ್ಲಿ ಎಐ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕು ಸಂಸ್ಥೆಗಳಲ್ಲಿ ನಾವೂ ಒಂದಾಗಿದ್ದೆವು. ಇಂದು ಸೃಷ್ಟಿಯಾಗಿರುವ ಹೊಸ ಸಾಧ್ಯತೆಗಳು ನನಗಿಂತ ಹೆಚ್ಚಾಗಿ ಯುವ ವಿದ್ಯಾರ್ಥಿಗಳಿಗೇ ಚೆನ್ನಾಗಿ ತಿಳಿದಿರಲು ಸಾಧ್ಯ" ಎಂದು ಅವರು ಹೇಳಿದರು.
ಸ್ಕೇಲಿಂಗ್ ಕಲಿಸುವ ಮಹತ್ವದ ಪಾಠಗಳು
ತಮ್ಮ ವೃತ್ತಿಜೀವನದಲ್ಲಿ ಕಲಿತ ದೊಡ್ಡ ಪಾಠವೆಂದರೆ 'ಸ್ಕೇಲಿಂಗ್' (ವ್ಯಾಪ್ತಿ ವಿಸ್ತರಣೆ) ಎಂದು ಬಣ್ಣಿಸಿದ ಆಲ್ಟ್‌ಮನ್, ವೈ ಕಾಂಬಿನೇಟರ್ (Y Combinator) ದಿನಗಳನ್ನು ಸ್ಮರಿಸಿದರು. ಸಂಸ್ಥೆ ದೊಡ್ಡದಾದಂತೆ ಕಡಿಮೆ ಕಂಪನಿಗಳಿಗೆ ನಿಧಿ ಒದಗಿಸಬೇಕೆಂಬ ವಾದವಿತ್ತು, ಆದರೆ ಸಂಸ್ಥೆಯ ಗಾತ್ರ ಹೆಚ್ಚಿದಂತೆ ಅದರೊಳಗಿನ ನೆಟ್‌ವರ್ಕ್ ಮೌಲ್ಯ ಅನಿರೀಕ್ಷಿತವಾಗಿ ವೃದ್ಧಿಸಿತು. ಇದೇ ನಿಯಮ ಎಐ ಕ್ಷೇತ್ರಕ್ಕೂ ಅನ್ವಯಿಸುತ್ತದೆ ಎಂದ ಅವರು, ಮಾದರಿಗಳನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸುವಾಗ ತಾಂತ್ರಿಕತೆ, ಕಂಪ್ಯೂಟಿಂಗ್ ಸಾಮರ್ಥ್ಯ, ಬಂಡವಾಳ ಮತ್ತು ಎಂಜಿನಿಯರಿಂಗ್ ಸವಾಲುಗಳು ಅನಿರೀಕ್ಷಿತವಾಗಿ ಎದುರಾಗುತ್ತವೆ. ಪ್ರತಿಯೊಂದು ಅಡಚಣೆಯನ್ನು ಪ್ರತ್ಯೇಕವಾಗಿ ಬಗೆಹರಿಸುತ್ತಾ ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯಬೇಕು ಎಂದರು.
ಚಾಟ್‌ಜಿಪಿಟಿ ಹುಟ್ಟಿಗೆ ಕಾರಣವಾದ ಆಕಸ್ಮಿಕ ಬಳಕೆ
ಓಪನ್‌ಎಐ ಸಂಸ್ಥೆಯು ಆರಂಭದಲ್ಲಿ ಜಿಪಿಟಿ-3 ಮಾದರಿಯನ್ನು ಬಳಸಿ ಯಾವ ಪ್ರಾಡಕ್ಟ್ ರೂಪಿಸಬೇಕೆಂದು ತೊಳಲಾಡುತ್ತಿತ್ತು ಎಂದು ಆಲ್ಟ್‌ಮನ್ ವಿವರಿಸಿದರು. 2020ರಲ್ಲಿ ಎಪಿಐ (API) ಬಿಡುಗಡೆ ಮಾಡಿದಾಗ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ ಡೆವಲಪರ್‌ಗಳು ವ್ಯಾಪಾರ ಕಟ್ಟುವ ಬದಲು, ಆ ಎಪಿಐ ಕೀಗಳನ್ನು ಕೇವಲ ಮಾಡೆಲ್ ಜತೆ ಚಾಟ್ ಮಾಡಲು ಬಳಸುತ್ತಿರುವುದನ್ನು ಕಂಪನಿ ಗಮನಿಸಿತು. ಬಳಕೆದಾರರ ಈ ನಡವಳಿಕೆಯನ್ನೇ ಆಧರಿಸಿ ಚಾಟ್‌ಬಾಟ್ ರೂಪಿಸಲಾಯಿತು. ಸಂಶೋಧನಾ ಪ್ರಾತ್ಯಕ್ಷಿಕೆಯಾಗಿ ಆರಂಭವಾದ ಚಾಟ್‌ಜಿಪಿಟಿ ನಂತರ ಜಾಗತಿಕವಾಗಿ ವೈರಲ್ ಆಗಿ ಇತಿಹಾಸ ಸೃಷ್ಟಿಸಿತು. ಬಳಕೆದಾರರು ಪ್ರಾಡಕ್ಟ್ ಅನ್ನು ಹೇಗೆ ಬಳಸುತ್ತಿದ್ದಾರೆ ಎಂಬುದರ ಮೇಲೆ ನಿಗಾ ಇಡುವುದು ಅತ್ಯಂತ ಮುಖ್ಯ ಎಂದು ಅವರು ತಿಳಿಸಿದರು.
ವಿದ್ಯುತ್ ಮತ್ತು ಇಂಟರ್ನೆಟ್‌ನಂತೆ ಎಐ ಒಂದು ನೂತನ 'ಯುಟಿಲಿಟಿ'
ಎಐ ತಂತ್ರಜ್ಞಾನವನ್ನು ವಿದ್ಯುತ್ ಹಾಗೂ ಇಂಟರ್ನೆಟ್‌ನಂತಹ ಸಾರ್ವಜನಿಕ ಸೇವೆಗಳಿಗೆ (Utility) ಹೋಲಿಸಿದ ಸ್ಯಾಮ್ ಆಲ್ಟ್‌ಮನ್, ಆರಂಭದಲ್ಲಿ ವಿದ್ಯುತ್ ಕಂಪನಿಗಳು ಕೇವಲ ಕರೆಂಟ್ ಮಾರಾಟ ಮಾಡದೆ ರಾತ್ರಿಯ ಬೆಳಕಿನ ಸೌಲಭ್ಯವನ್ನು ಮಾರಾಟ ಮಾಡಿದವು. ಮುಂದಿನ ದಿನಗಳಲ್ಲಿ ಹಾರ್ಡ್‌ವೇರ್‌ಗಿಂತ ಹೆಚ್ಚಾಗಿ ತಂತ್ರಜ್ಞಾನದ ಬುದ್ಧಿಮತ್ತೆಯನ್ನು ಪಡೆಯುವುದಷ್ಟೇ ಮುಖ್ಯವಾಗಲಿದೆ ಎಂದರು. "ಯಾರೋ ಬಂದು ಸಮಸ್ಯೆ ನೀಡಲಿ ಎಂದು ಕಾಯುವ ಬದಲು, ಎಐ ತಂತ್ರಜ್ಞಾನ ಒಬ್ಬ ವ್ಯಕ್ತಿಯ ಕಾರ್ಯಸಾಮರ್ಥ್ಯದ ಗಡಿಯನ್ನು ವಿಸ್ತರಿಸಿರುವ ಈ ಕಾಲದಲ್ಲಿ ಹೊಸತನ್ನು ಸೃಷ್ಟಿಸಲು ಮುಂದಾಗಿ" ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

