ಆಗಸ್ಟ್ 26 ರಂದು ಚೀನಾ ಮತ್ತು ನೇಪಾಳ ಗಡಿಯಲ್ಲಿರುವ ಪ್ರಮುಖ ವಲಸೆ ಕೇಂದ್ರವಾದ ಗೈರಾಂಗ್ ಪೋರ್ಟ್‌ನಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ನಂತರ 49 ಭಾರತೀಯರು ಸೇರಿದಂತೆ ಒಟ್ಟು 261 ವಿದೇಶಿ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ಚೀನಾ ಅಧಿಕಾರಿಗಳು ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾಪತ್ತೆಯಾಗಿರುವ ಈ ವಿದೇಶಿಯರು ಒಟ್ಟು 23 ದೇಶಗಳಿಗೆ ಸೇರಿದವರಾಗಿದ್ದು, ವಿದೇಶಾಂಗ, ಸಾರ್ವಜನಿಕ ಭದ್ರತೆ, ಪ್ರವಾಸೋದ್ಯಮ ಮತ್ತು ತುರ್ತು ನಿರ್ವಹಣಾ ಇಲಾಖೆಗಳು ಜಂಟಿಯಾಗಿ ನಡೆಸಿದ ತನಿಖೆ ಮತ್ತು ಪರಿಶೀಲನೆಯ ನಂತರ ಈ ಮಾಹಿತಿಯನ್ನು ಪ್ರಕಟಿಸಲಾಗಿದೆ.
ಅಧಿಕೃತ ವರದಿಯ ಪ್ರಕಾರ ನಾಪತ್ತೆಯಾದವರಲ್ಲಿ ನೇಪಾಳದ 104, ಭಾರತದ 49, ಲಾತ್ವಿಯಾದ 33, ಅಮೆರಿಕದ 18, ಬ್ರಿಟನ್‌ನ 15, ಕೆನಡಾದ 6, ಆಸ್ಟ್ರೇಲಿಯಾದ 6, ದಕ್ಷಿಣ ಆಫ್ರಿಕಾದ 4, ಮಲೇಷ್ಯಾ, ಜರ್ಮನಿ ಮತ್ತು ರಷ್ಯಾದ ತಲಾ ಮೂವರು, ಐರ್ಲೆಂಡ್, ಎಸ್ಟೋನಿಯಾ, ಫ್ರಾನ್ಸ್, ನೆದರ್ಲ್ಯಾಂಡ್ಸ್, ನ್ಯೂಜಿಲ್ಯಾಂಡ್‌ನ ತಲಾ ಇಬ್ಬರು ಹಾಗೂ ಕಝಕಸ್ಥಾನ್, ಫಿನ್ಲ್ಯಾಂಡ್, ಲಿಥುವೇನಿಯಾ, ಪೋರ್ಚುಗಲ್, ಉಕ್ರೇನ್, ಸ್ಪೇನ್ ಮತ್ತು ಹಂಗೇರಿ ದೇಶಗಳ ತಲಾ ಒಬ್ಬರು ಸೇರಿದ್ದಾರೆ. ಭಾರತ ಮತ್ತು ಚೀನಾ ನಡುವಿನ ಬಾಂಧವ್ಯ ವೃದ್ಧಿಸಿದ ನಂತರ ಕೈಲಾಸ ಮಾನಸಸರೋವರ ಯಾತ್ರೆಯಲ್ಲಿ ಪಾಲ್ಗೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಯಾತ್ರಿಕರು ಟಿಬೆಟ್‌ಗೆ ಭೇಟಿ ನೀಡಿದ್ದರು.
ಈ ಭೀಕರ ಪ್ರವಾಹವು ಟಿಬೆಟ್‌ನ ಗೈರಾಂಗ್ ಜಿಲ್ಲೆಯಲ್ಲಿ ತೀವ್ರ ವಿನಾಶವನ್ನುಂಟುಮಾಡಿದಾಗ, ಕೆಲವು ಭಾರತೀಯ ಯಾತ್ರಿಕರು ಟಿಬೆಟ್-ನೇಪಾಳ ಗಡಿಯಲ್ಲಿರುವ ವಲಸೆ ಕಚೇರಿಯ ಕಟ್ಟಡದಲ್ಲಿದ್ದರು ಎಂದು ವರದಿಯಾಗಿದೆ.ವಿಶಾಲವಾದ ವಲಸೆ ಕಚೇರಿಯ ಕಟ್ಟಡವನ್ನು ಬೃಹತ್ ಪ್ರವಾಹವು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗುತ್ತಿರುವ ರೋಮಾಂಚಕಾರಿ ವೀಡಿಯೊಗಳು ಜಾಗತಿಕವಾಗಿ ವೈರಲ್ ಆಗಿದ್ದವು.

