Friday, 23 Apr, 1.44 pm Kannada News Now

ಭಾರತ
ದೆಹಲಿಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಕಠಿಣ ಕ್ರಮ ತೆಗೆದುಕೊಳ್ಳಿ, ಇಲ್ಲದಿದ್ದರೆ ದುರಂತ ಸಂಭವಿಸುತ್ತದೆ : ಪ್ರಧಾನಿ ಮೋದಿಗೆ ಕೇಜ್ರಿವಾಲ್ ಮನವಿ

ನವದೆಹಲಿ : ನಗರದಾದ್ಯಂತ ಆಮ್ಲಜನಕ ಪೂರೈಕೆಯ ತೀವ್ರ ಕೊರತೆಯ ಬಗ್ಗೆ ರಾಷ್ಟ್ರ ರಾಜಧಾನಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಕಠಿಣ ಕ್ರಮ ತೆಗೆದುಕೊಳ್ಳಿ, ಇಲ್ಲದಿದ್ದರೆ 'ದುರಂತ ಸಂಭವಿಸುತ್ತದೆ' ಎಂದು ಕೇಳಿಕೊಂಡಿದ್ದಾರೆ.

ಪ್ರಸ್ತುತ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಭೆಯಲ್ಲಿ ಭಾಗವಹಿಸಿದ ಇತರ ಮುಖ್ಯಮಂತ್ರಿಗಳಲ್ಲಿ ಅರವಿಂದ ಕೇಜ್ರಿವಾಲ್ ಕೂಡ ಇದ್ದರು.

'ದೆಹಲಿಯಲ್ಲಿ ಆಮ್ಲಜನಕದ ಕೊರತೆ ಬಹಳ ಇದೆ. ಇಲ್ಲಿ ಆಮ್ಲಜನಕ ಉತ್ಪಾದಿಸುವ ಘಟಕ ಇಲ್ಲದಿದ್ದರೆ ದೆಹಲಿಯ ಜನರಿಗೆ ಆಮ್ಲಜನಕ ಸಿಗುವುದಿಲ್ಲವೇ?' ಶುಕ್ರವಾರ ಪ್ರಧಾನಿ ಮೋದಿ ಅವರೊಂದಿಗಿನ ಸಭೆಯಲ್ಲಿ ಅರವಿಂದ ಕೇಜ್ರಿವಾಲ್ ಹೇಳಿದರು.

'ದೆಹಲಿಯ ಆಸ್ಪತ್ರೆಯಲ್ಲಿ ಒಬ್ಬ ರೋಗಿಯು ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ಸಾಯಲಿರುವಾಗ ನಾನು ಯಾರೊಂದಿಗೆ ಮಾತನಾಡಬೇಕು ಎಂದು ದಯವಿಟ್ಟು ಸೂಚಿಸಿ? ನಾವು ಜನರನ್ನು ಸಾಯಲು ಬಿಡಲು ಸಾಧ್ಯವಿಲ್ಲ. ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ, ಇಲ್ಲದಿದ್ದರೆ ದೆಹಲಿಯಲ್ಲಿ ದುರಂತ ಸಂಭವಿಸುತ್ತದೆ.' ಅರವಿಂದ ಕೇಜ್ರಿವಾಲ್ ಹೇಳಿದರು.

ಕೇಂದ್ರವು ಇತ್ತೀಚೆಗೆ ದೆಹಲಿಯ ಆಮ್ಲಜನಕ ಕೋಟಾವನ್ನು ೩೭೮ ಮೆಟ್ರಿಕ್ ಟನ್ ಗಳಿಂದ ೪೮೦ ಮೆಟ್ರಿಕ್ ಟನ್ ಗಳಿಗೆ ಏರಿಸಿದೆ. ಆದಾಗ್ಯೂ, ನಗರದಲ್ಲಿ ಕೇವಲ ೩೮೦ ಟನ್ ಆಮ್ಲಜನಕ ಮಾತ್ರ ಬಂದಿದೆ ಎಂದು ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

ಇತರ ರಾಜ್ಯಗಳು ದೆಹಲಿಗೆ ಆಮ್ಲಜನಕ ಪೂರೈಕೆಯನ್ನು ನಿರ್ಬಂಧಿಸುತ್ತಿದೆ ಎಂದು ಅರವಿಂದ ಕೇಜ್ರಿವಾಲ್ ಆರೋಪಿಸಿದರು. 'ಟ್ರಕ್ ಗಳನ್ನು ನಿಲ್ಲಿಸುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಯಿರಿ' ಎಂದು ಅವರು ಪ್ರಧಾನಿ ಮೋದಿ ಅವರನ್ನು ಕೇಳಿದರು.

'ದಯವಿಟ್ಟು ನಮಗೆ ಆಮ್ಲಜನಕ ಪೂರೈಕೆಯನ್ನು ಪಡೆಯಲು ಸಹಾಯ ಮಾಡಿ,' ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.

'ಮುಖ್ಯಮಂತ್ರಿ ಆಗಿದ್ದರೂ ನನಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ರಾತ್ರಿಯಿಡೀ ನನಗೆ ಮಲಗಲು ಸಾಧ್ಯವಾಗುವುದಿಲ್ಲ. ಯಾವುದೇ ಅಹಿತಕರ ಘಟನೆ ನಡೆದರೆ ದಯವಿಟ್ಟು ನನ್ನನ್ನು ಕ್ಷಮಿಸಿ' ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.

ಒಡಿಶಾ ಮತ್ತು ಪಶ್ಚಿಮ ಬಂಗಾಳದಿಂದ ದೆಹಲಿಗೆ ಬರಲು ನಿರ್ಧರಿಸಿರುವ ಆಮ್ಲಜನಕ ಪೂರೈಕೆಯನ್ನು ಏರ್ ಲಿಫ್ಟ್ ಮಾಡಬೇಕು ಅಥವಾ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ತರಬೇಕು ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.

ಆರ್ಮಿ ಆಮ್ಲಜನಕ ಘಟಕಗಳನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಅರವಿಂದ ಕೇಜ್ರಿವಾಲ್ ಸಲಹೆ ನೀಡಿದರು. 'ಕೇಂದ್ರವು ಸೇನೆಯ ಮೂಲಕ ಎಲ್ಲಾ ಆಮ್ಲಜನಕ ಘಟಕಗಳನ್ನು ಸ್ವಾಧೀನಪಡಿಸಿಕೊಳ್ಳಬೇಕು, ಪ್ರತಿಯೊಂದು ಟ್ರಕ್ ನೊಂದಿಗೆ ಸೇನಾ ಬೆಂಗಾವಲು ವಾಹನವೂ ಇರಬೇಕು' ಎಂದು ಅವರು ಹೇಳಿದರು.

ಇದಲ್ಲದೆ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕೋವಿಡ್-19 ಲಸಿಕೆಗೆ ಸಾರ್ವತ್ರಿಕ ಬೆಲೆ ನಿಗದಿಪಡಿಸಬೇಕೆಂದು ಅರವಿಂದ ಕೇಜ್ರಿವಾಲ್ ಒತ್ತಾಯಿಸಿದರು.





Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top